ಕಬಡ್ಡಿ ರಾಣಿ ಮಮತಾ ಪೂಜಾರಿ ಸಂದರ್ಶನ
March 14, 2019ತೆರೆ ಮೇಲೆ ಬರಲು ಸಜ್ಜಾಗಿದೆ ‘ಕೇಸರಿ’
March 18, 2019ಹೊಸ ಫ್ಯಾಶನ್ ಗೆ ತೆರೆದುಕೊಳ್ಳಿ
– ಮಿಲಿಟರಿ ವಿನ್ಯಾಸದ ಉಡುಗೆಗೆ ಬೇಡಿಕೆ
– ಜಾಕೆಟ್,ಟೋಪಿಗಳಲ್ಲೂ ಮಿಲಿಟರಿ ಪ್ರಿಂಟ್
ಫ್ಯಾಶನ್ ಲೋಕವೇ ಹಾಗೆ, ಅದೊಂದು ಕಲರ್ ಫುಲ್ ಪ್ರಪಂಚ. ಹೊಸ ಹೊಸ ವಿನ್ಯಾಸಗಳಿರುವ ಉಡುಪುಗಳು, ಉಡುಗೆ ತೊಡುಗೆಯಲ್ಲಿ ನಾವೀನ್ಯತೆ ಪ್ರತಿ ದಿನವೂ ವ್ಯತ್ಯಾಸಗೊಳ್ಳುತ್ತಲೇ ಇರುತ್ತವೆ. ಇವೆಲ್ಲವುಗಳಿಂದ ನಾವು ಹೊಸ ಫ್ಯಾಶನ್ ಗೆ ಅಪ್ ಡೇಟ್ ಆಗಬೇಕೆಂದು ಬಯಸುವುದು ಸಹಜ. ಅದರಲ್ಲೂ ಹದಿಹರೆಯದ ಯುವಕ,ಯುವತಿಯರಿಗೆ ಈ ಉಡುಗೆ ತೊಡುಗೆಗಳು ಬಹು ಬೇಗ ಆಕರ್ಷಕ್ಕೊಳಗಾಗುತ್ತವೆ. ಹಾಗಾಗಿ ತಾವು ಹೊಸ ಫ್ಯಾಶನ್ ಗೆ ತೆರೆದು ಕೊಳ್ಳಬೇಕೆಂದು ಇವುಗಳಿಗೆ ಪ್ರಾಧಾನ್ಯತೆ ನೀಡುತ್ತಾರೆ.
ಮಿಲಿಟರಿ ವಿನ್ಯಾಸದ ಉಡುಗೆಗಳು
ಇದೀಗ ಟ್ರೆಂಡ್ ನಲ್ಲಿರುವ ದಿರಿಸುಗಳಲ್ಲಿ ಮಿಲಿಟರಿ ವಿನ್ಯಾಸದ ಉಡುಗೆ ಕೂಡ ಒಂದು. ಈ ಮಿಲಿಟರಿ ವಿನ್ಯಾಸದ ಉಡುಗೆಗಳು ಸದಾ ಕಾಲವೂ ಆಕರ್ಷಕವೇ . ಮಿಲಿಟರಿ ವಿನ್ಯಾಸವಿರುವ ಜಾಕೆಟ್ ಗಳು, ಪ್ಯಾಂಟ್ , ಶರ್ಟ್ ಇತ್ಯಾದಿಗಳು ಇದೀಗ ಜನಪ್ರಿಯ ಎಂದೆನಿಸಿ ಕೊಂಡಿವೆ. ಹೀಗೆ ಪ್ರಸಿದ್ಧ ಹಾಗೂ ಅತ್ಯಾಧುನಿಕ ಟ್ರೆಂಡ್ ನ ಹೊಸ ವಿನ್ಯಾಸದ ಉಡುಗೆ ತೊಡುಗೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಫ್ಯಾಶನ್ ಲೋಕದಲ್ಲಿ ರಾರಾಜಿಸುತ್ತಿವೆ.
ಶರ್ಟ್,ಜಾಕೆಟ್ ಗಳ ಬಗ್ಗೆ ಕ್ರೇಜ್ ಜಾಸ್ತಿ
ಇನ್ನು ಈ ಕ್ರೇಜ್ ಗೆ ಪುಟ್ಟ ಮಕ್ಕಳು ಕೂಡ ಮರುಳಾಗಿದ್ದಾರೆ. ಮಕ್ಕಳ ಪೋಷಕರಂತು ಮಿಲಿಟರಿ ವಿನ್ಯಾಸವಿರುವ ಬಟ್ಟೆಗಳನ್ನು ಖರೀದಿಸಿ ಮಕ್ಕಳಿಗೆ ಅಲಂಕಾರ ಮಾಡಿ ಸಂತೋಷವನ್ನು ಕಂಡುಕೊಳ್ಳುತ್ತಾರೆ. ದೊಡ್ಡವರು ಪ್ಯಾಶನ್ ಜಗತ್ತಿಗೆ ತೆರೆದು ಕೊಂಡರೂ ಮಕ್ಕಳನ್ನು ಮೀರಿಸಲು ಸಾಧ್ಯವೇ ಇಲ್ಲ ಎನ್ನ ಬಹುದು. ಈಗಿನ ಮಕ್ಕಳು ಈ ವಿಷಯದಲ್ಲಿ ತುಂಬಾ ಸೂಕ್ಷ್ಮ. ಹೊರಗಡೆ ಸಭೆ,ಸಮಾರಂಭ,ಕಾರ್ಯಕ್ರಮಗಳಿಗೆಲ್ಲಾ ಹೋಗಿ ಬಂದಾಗ ಇತರರನ್ನು ಗಮನಿಸಿ ಆ ಹೊಸ ಟ್ರೆಂಡ್ ಬಗ್ಗೆ ಮಾತನಾಡುತ್ತಾರೆ. ಹೀಗಾಗಿ ಮಕ್ಕಳ ಉಡುಗೆಯಲ್ಲಿಯೂ ಸಾಕಷ್ಟು ಮಾರ್ಪಾಡುಗಳಾಗಿವೆ. ಅವರ ಅಭಿರುಚಿ,ಡಿಮ್ಯಾಂಡ್ ಗೆ ತಕ್ಕ ಹಾಗೆ ಹೊಸ ಹೊಸ ವಿನ್ಯಾಸಗಳ ಉಡುಪುಗಳು ಮಾರುಕಟ್ಟೆಗೆ ಕಾಲಿಡುತ್ತಿವೆ. ಹುಡುಗಿಯರಿಗಿಂತ ಗಂಡು ಮಕ್ಕಳಿಗೆ ಆಯ್ಕೆಗಳು ತುಂಬಾ ವಿರಳವಾಗಿರುತ್ತವೆ. ಆದರೂ ಗಂಡು ಮಕ್ಕಳು ತಮಗಿಷ್ಟವಾದ ಡ್ರೆಸ್ ಗಳು ಬೇಕೆಂದು ಹಠ ಮಾಡುವುದು ಸಾಮಾನ್ಯ. ಇನ್ನೂ ಇತ್ತೀಚಿನ ದಿನಗಳಲ್ಲಿ ವಾರ ವಾರವೂ ಸಾಕಷ್ಟು ಸಿನಿಮಾಗಳು ತೆರೆ ಮೇಲೆ ಮೂಡಿ ಬರುತ್ತಲೇ ಇದ್ದಾವೆ. ಇವುಗಳನ್ನು ನೋಡಿ ಆ ಸ್ಟೈಲ್ ಡ್ರೆಸ್ ಬೇಕು, ಆ ಫ್ಯಾಶನ್ ಬೇಕು ಎಂದು ಮಕ್ಕಳು ಹಠ ಹಿಡಿಯುತ್ತವೆ. ಇಷ್ಟು ಮಾತ್ರವಲ್ಲ. ಅದನ್ನು ಕೊಡಿಸುವ ತನಕ ಅವುಗಳ ಪ್ರತಿಭಟನೆ ಮುಂದುವರಿಯುತ್ತಲೇ ಇರುತ್ತದೆ. ಹೀಗಾಗಿ ಎಳೆಯ ಹುಡುಗರಿಗೆ ಹುಡುಗಿಯರಿಗಿಂತಲೂ ಮಿಲಿಟರಿ ಶರ್ಟ್, ಜಾಕೆಟ್ ಗಳ ಬಗ್ಗೆ ಕ್ರೇಜ್ ಸ್ವಲ್ಪ ಜಾಸ್ತಿಯೇ..
ಯಾವುದು ಬೇಕೋ ಅದನ್ನು ಆರಿಸಿ
ನೀವು ಉಡುಪುಗಳನ್ನು ಖರೀಸುವಾಗ ಚಿಕ್ಕ ಚಿಕ್ಕ ಶಾಪ್ ಗಳಿಗಿಂತಲೂ ದೊಡ್ಡ ಮಾಲ್ ಅಥವಾ ಕಿಡ್ಸ್ ಕ್ಲಾತ್ ಸೆಂಟರ್ ಗೆ ಹೋದರೆ ಅಲ್ಲಿ ಹೆಚ್ಚಿನ ಆಯ್ಕೆಗಳಿಗೆ ಅವಕಾಶಗಳಿವೆ. ಶರ್ಟ್ ಗಳ ಕಲೆಕ್ಷನ್ ಕೂಡಾ ಅಧಿಕವಾಗಿವೆ. ಶರ್ಟ್ ಗಳಲ್ಲೇ ಎರಡು ಮೂರು ಶೇಡ್ ಗಳಿದ್ದು, ಯಾವುದನ್ನೂ ಬೇಕಾದರೂ ಆರಿಸಿಕೊಳ್ಳಬಹುದು. ಈ ಶರ್ಟ್ ಹಾಕಿದಾಗ ನೀವು ಕಂದು ಬಣ್ಣ ಅಥವಾ ಕಪ್ಪು ಬಣ್ಣದ ಪ್ಯಾಂಟ್ , ಹಾಫ್ ಪ್ಯಾಂಟ್ ಹಾಕಿದರೆ ಲುಕ್ ಕಾಣಬಲ್ಲುದು. ಫ್ಲೇನ್ ಟೀ ಶರ್ಟ್ ಹಾಕಿ ಅದರ ಮೇಲೆ ಸ್ಲೀವ್ ಲೆಸ್ ಆಗಿರುವ ಮಿಲಿಟರಿ ಜಾಕೆಟ್ ಕೂಡ ಹಾಕಿಕೊಳ್ಳ ಬಹುದು.
ಯುವ ಜನತೆ ಮಿಲಿಟರಿ ಧಿರಿಸಿಗೆ ಫಿದಾ
ಮಿಲಿಟರಿ ಸಮವಸ್ತ್ರದಂತಹ ಉಡುಪುಗಳನ್ನು ಉಟ್ಟು ಕೊಂಡಿರುವ ಹುಡುಗ ಹುಡುಗಿಯರನ್ನು ನೀವು ನಿಮ್ಮ ಸುತ್ತ ಮುತ್ತ ನೋಡಿರ ಬಹುದು. ಫ್ಯಾಶನ್ ಲೋಕದಲ್ಲಿ ಇದೊಂದು ಟ್ರೆಂಡ್ ಆಗಿದ್ದು ಯುವ ಜನತೆಯೂ ಮಿಲಿಟರಿ ಪ್ರಿಂಟ್ ಇರುವ ದಿರಿಸುಗಳಿಗೆ ಮಾರು ಹೋಗಿದ್ದಾರೆ. ಜಾಕೆಟ್ ಗಳು, ಅಂಗಿ, ಲಂಗ, ಪ್ಯಾಂಟ್ ಗಳು ಮಿಲಿಟರಿ ಸಮವಸ್ತ್ರದ ಪ್ರಿಂಟ್ ಕಾಣಸಿಗುತ್ತಿದೆ. ಮಿಲಿಟರಿ ಪ್ರಿಂಟ್ ಕೇವಲ ಉಡುಪುಗಳಿಗೆ ಮಾತ್ರವಲ್ಲ ಎಲ್ಲೆಲ್ಲೂ ಇವುಗಳಿಗೆ ಬೇಡಿಕೆ ಇರುವ ಕಾರಣ, ಪಾದರಕ್ಷೆ,ಹ್ಯಾಟ್,ಕನ್ನಡಕದ ಫ್ರೇಮ್,ಬ್ಯಾಗ್, ಕೈ ಗಡಿಯಾರ, ನೈಲ್ ಪಾಲಿಶ್,ಕಿವಿಯೋಲೆ,ತಲೆದಿಂಬು ಕವರ್, ಸೋಫಾ ಕವರ್ ಹೀಗೆ ಇತ್ಯಾದಿ ವಸ್ತುಗಳ ಮೇಲೆಲ್ಲಾ ಮಿಲಿಟರಿ ಪ್ರಿಂಟ್ ಗಳು ತಮ್ಮ ಸ್ಥಾನ ಪಡೆದು ಕೊಂಡಿವೆ.
ಉಲ್ಟಾ ಪಲ್ಟಾ ಜಾಕೆಟ್ ಗಳು
ಈ ಮಿಲಿಟರಿ ಫ್ಯಾಶನ್ ಹೊಸ ಫ್ಯಾಶನ್ ಅಲ್ಲದಿಲ್ಲದಿದ್ದರೂ ಫ್ಯಾಶನ್ ಲೋಕದಲ್ಲಿ ಇದು ಆಗಾಗ ಸುದ್ದಿ ಮಾಡುತ್ತಲೇ ಇರುತ್ತದೆ. ಒಳಗೂ- ಹೊರಗೂ ಎರಡೂ ಬದಿಯಲ್ಲಿಯೂ ಬೇರೆ ಬೇರೆ ಬಣ್ಣದ ಮಿಲಿಟರಿ ಪ್ರಿಂಟ್ ಇರುವ ಜಾಕೆಟ್ ಗಳು ಇದೀಗ ಪರಿಚಯವಾಗುತ್ತಿದೆ. ಇದರ ವಿಶೇಷತೆಯೇ ಉಲ್ಟಾ ಪಲ್ಟಾ ಮಾಡಿ ತೊಡುವುದಾಗಿದೆ. ಒಂದು ದಿನ ಮೇಲ್ಭಾಗ ಮಾಡಿ ತೊಟ್ಟರೆ ಇನ್ನೊಂದು ದಿನ ಒಳಗಿನ ಭಾಗವನ್ನು ಹೊರ ಹಾಕಿ ತೊಡ ಬಹುದು ಇವುಗಳಲ್ಲಿಯೂ ಬೇರೆ ಬೇರೆ ಬಣ್ಣಗಳು ಇರುತ್ತವೆ. ನಿಮ್ಮ ಅಭಿರುಚಿಗೆ ತಕ್ಕಂತೆ ನೀವು ಆಯ್ಕೆ ಮಾಡಿಕೊಳ್ಳಬಹುದು. ಹೀಗೆ ಪ್ಯಾಂಟ್ , ಶಾರ್ಟ್ಸ್, ಲಂಗಕ್ಕೆ ಹೋಲುವಂತಹ ಕಲರ್ ನ ಭಾಗವನ್ನು ಹೊರ ಹಾಕಿ ಜಾಕೆಟ್ ಹಾಕಿಕೊಂಡರೆ ಒಳ್ಳೆಯ ಲುಕ್ ಬರುತ್ತದೆ.
ಈ ಸ್ಟೈಲನ್ನು ಮಾಡಿ ಮತ್ತೆ ಸಂಭ್ರಮಿಸಿ
ದೇಶ ಭಕ್ತಿಯ ಚಲನ ಚಿತ್ರಗಳು ರಿಲೀಸ್ ಆದ ಮೇಲಂತೂ ಈ ಟ್ರೆಂಡ್ ಗೆ ಇನ್ನಿಲ್ಲದ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ರಿಲೀಸ್ ಆದ ಉರಿ ಚಿತ್ರವೇ ಇದಕ್ಕೆ ಪಕ್ಕಾ ಉದಾಹರಣೆ. ಆದರೆ ಮಿಲಿಟರಿ ಫ್ಯಾಶನ್ ಹಿಂದಿನಿಂದಲೂ ಇರುವುದರಿಂದ ಚಲನ ಚಿತ್ರಗಳಿಂದಲೂ ಇರಬಹುದು ಒಟ್ಟಿನಲ್ಲಿ ಮಿಲಿಟರಿ ಪ್ರಿಂಟ್ ನ ಉಡುಪುಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಮಿಲಿಟರಿ ಪ್ರಿಂಟ್ ದಿರಿಸುಗಳನ್ನು ಪುರುಷರು , ಮಹಿಳೆಯರೂ ಇಬ್ಬರೂ ತೊಡಬಹುದು. ಇಂಥ ಕೋಟು ಅಥವಾ ಜಾಕೆಟ್ ಅನ್ನು ಗೌನ್,ಡ್ರೆಸ್ , ಶಾರ್ಟ್ ಸ್ಕರ್ಟ್ ,ಪ್ಯಾಂಟ್ , ಲಂಗ ಯಾವುದರ ಜತೆಗೂ ಹಾಕಿಕೊಳ್ಳಬಹುದು. ಹೀಗೆ ಹಿಂದೊಮ್ಮೆ ಟ್ರೆಂಡ್ ಆಗಿದ್ದ ಈ ಸ್ಟೈಲನ್ನು ಮಾಡಿ ಮತ್ತೆ ಸಂಭ್ರಮಿಸಿ..