#10 years challenge ನೀವು ರೆಡಿನಾ?
March 8, 2019ಎಕ್ಸ್ ಕ್ಲೂಸಿವ್ ಸಂದರ್ಶನಲ್ಲಿ ವಿಜಯ ಕುಮಾರಿ
March 12, 2019ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ
ಈಗಿನ ಒತ್ತಡದ ಜೀವನ ಕ್ರಮದಲ್ಲಿ ಕೆಲವರಿಗೆ ಊಟ ತಿಂಡಿ ಸೇವಿಸುವುದಕ್ಕೂ ಸಮಯ ಇರುವುದಿಲ್ಲ. ಬೆಳಗ್ಗಿನ ಕಾಫಿ ತಿಂಡಿಯನ್ನು ಮಧಾಹ್ನಕ್ಕೆ ಸೇವಿಸುವವರು ಇದ್ದಾರೆ. ಹೊತ್ತೊತ್ತಿಗೆ ಊಟ ಮಾಡುವವರು ಇಂದು ತುಂಬಾ ವಿರಳ. ಹೀಗಾಗಿ ತಿನ್ನುವ ವಿಷಯದಲ್ಲಿಯೂ ಎಷ್ಟು ಹೊತ್ತಿಗೆ ತಿಂದಿದ್ದೆ ಎಂಬುದೇ ಮರೆತು ಹೋಗಿರುತ್ತದೆ. ನಾವು ಊಟ ತಿಂಡಿಯನ್ನು ನಿರ್ಲಕ್ಷ್ಯ ಮಾಡುವುದು ಖಂಡಿತ ತಪ್ಪು. ನಮ್ಮ ಆರೋಗ್ಯಕರ ಜೀವನಕ್ಕೆ ನಾವು ಸೇವಿಸುವ ಆಹಾರ ಹಾಗೂ ಅವುಗಳ ಸೇವನೆಯ ಸಮಯ ಕೂಡ ಅವಶ್ಯಕ. ಆಹಾರ ತೆಗೆದುಕೊಳ್ಳಲು ಬೆಳಗ್ಗೆ,ಮಧ್ಯಾಹ್ನ ಹಾಗೂ ರಾತ್ರಿ ಎಂಬಂತೆ ಮೂರು ಹೊತ್ತು ಸೂಕ್ತವಾದ ಸಮಯ. ಹೆಚ್ಚಿನವರು ಆಫೀಸಿಗೆ ಹೊರಡುವ ಭರದಲ್ಲಿ ಬೆಳಗ್ಗಿನ ತಿಂಡಿಯನ್ನೇ ಮರೆತು ಬಿಡುತ್ತಾರೆ. ಬೆಳಗ್ಗೆ ತಡವಾಗಿ ಎದ್ದು ಬಿಟ್ಟರೆ ಆಫೀಸಿಗೆ ಸಮಯವಾಯ್ತು ಅಂದು ಕೊಂಡು ಬೆಳಗ್ಗಿನ ಉಪಹಾರವನ್ನೇ ತಪ್ಪಿಸಿ ಕೊಳ್ಳುವುದಿದೆ. ಹೀಗಾಗಿ ಆರೋಗ್ಯಕರ ಜೀವನಕ್ಕೆ ಬೆಳಗ್ಗಿನ ತಿಂಡಿ ಬೇಕೆ ಬೇಕು.
10 ಗಂಟೆ ಮುಂಚಿತವಾಗಿ ತಿನ್ನಿ
ಬೆಳಗ್ಗೆ ಆಫೀಸ್ ಗೆ ಬೇಗ ಹೋಗ ಬೇಕೆಂದು ನೀವಂದು ಕೊಂಡಿದ್ದರೆ ಸ್ವಲ್ಪ ಬೇಗ ಎದ್ದೇಳುವುದು ಒಳ್ಳೆಯದು. ಆಫೀಸಿಗೆ ಬೇಗ ಹೋಗಬೇಕೆಂಬ ನೆಪದಲ್ಲಿ ನಿಮ್ಮ ಆರೋಗ್ಯವನ್ನು ಮರೆಯದಿರಿ. ಬೆಳಗ್ಗಿನ ತಿಂಡಿಯನ್ನು 10 ಗಂಟೆಗಿಂತ ಮುನ್ನ ಸೇವಿಸಿ. ನಿಮ್ಮ ಮುಂಜಾವನ್ನು ತಿಂಡಿಯೊಂದಿಗೆ ಆರಂಭಿಸಿ. ಒಂದು ಬೇಯಿಸಿದ ಮೊಟ್ಟೆಯನ್ನಾದರೂ ಸೇವಿಸಬಹುದು. ಒಟ್ಟಿನಲ್ಲಿ ಬೆಳಗ್ಗೆ ಏನನ್ನು ತಿನ್ನದೇ ಹೊರಡುವುದನ್ನು ರೂಢಿ ಮಾಡಿಕೊಳ್ಳಬೇಡಿ. ಬೇಯಿಸಿದ ಮೊಟ್ಟೆಯು ನೀವು ಹಸಿದಿರುವುದನ್ನು ತಡೆಯುತ್ತದೆ. ಪ್ರತಿನಿತ್ಯ ಬೆಳಗ್ಗಿನ ತಿಂಡಿ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಶಕ್ತಿ ಹಾಗೂ ದಿನವಿಡೀ ಚೈತನ್ಯದಿಂದಿರಲು ಸಹಾಯ ಮಾಡುತ್ತದೆ.
ವ್ಯಾಯಾಮ ಮತ್ತು ಡಯಟ್
ಹೃದಯ ಮತ್ತು ದೇಹವನ್ನು ಆರೋಗ್ಯಕರವಾಗಿಡುವಲ್ಲಿ ವ್ಯಾಯಾಮ ಪ್ರಮುಖ ಪಾತ್ರ ವಹಿಸುತ್ತದೆ. ನಿತ್ಯವೂ ವ್ಯಾಯಾಮ ಮಾಡಿದರೆ ದೇಹವು ಪ್ರಪುಲ್ಲತೆಯಿಂದ ಕೂಡಿರುತ್ತದೆ. ದಿನದ 24 ಗಂಟೆಯಲ್ಲಿ 30 ರಿಂದ 45 ನಿಮಿಷಗಳ ಕಾಲ ನಿಮ್ಮ ಸಮಯವು ವ್ಯಾಯಾಮಕ್ಕಾಗಿ ಮೀಸಲಾಗಿರಲಿ. ನಡಿಗೆ,ಯೋಗಭ್ಯಾಸ ,ಜಾಗಿಂಗ್ ಹಾಗೂ ದೈಹಿಕ ಕಸರತ್ತು ಮಾಡುವುದರಿಂದ ನಿಮ್ಮ ಮನಸ್ಸು ಮತ್ತು ದೇಹ ಎರಡನ್ನು ಆರೋಗ್ಯವಾಗಿಡಲು ಸಾಧ್ಯವಿದೆ. ಇನ್ನು ಆರೋಗ್ಯಕಾರಿ ಡಯಟ್ ನಿಮ್ಮನ್ನು ಕೆಲವು ಕಾಯಿಲೆಗಳಿಂದ ದೂರವಿರುವಂತೆ ನೋಡಿಕೊಳ್ಳಬಹುದು. ಮುಖ್ಯವಾಗಿ ಆರೋಗ್ಯಕಾರಿ ಆಹಾರ ಸೇವನೆಯಿಂದ ಹೃದಯ ಸಂಬಂಧಿತ ಕಾಯಿಲೆ ದೂರವಾಗುತ್ತದೆ. ನೀವು ತಿನ್ನುವ ಆಹಾರ ಪದಾರ್ಥಗಳು ನೀವು ತಿನ್ನಲು ಯೋಗ್ಯವಾಗಿವೆಯೇ ಹಾಗೂ ಅವುಗಳು ಹೆಚ್ಚು ಪ್ರೊಟೀನ್ ಅಂಶಗಳಿಂದ ಕೂಡಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಸೇವಿಸಿ. ತಾಜಾ ಹಣ್ಣುಗಳ ಸೇವನೆ,ತರಕಾರಿ,ಸೊಪ್ಪು, ಮೊಳಕೆ ಕಾಳುಗಳ ಸೇವನೆ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಊಟದ ಬಗ್ಗೆ ನಿರ್ಲಕ್ಷ್ಯ ಬೇಡ
ದಿನಕ್ಕೆ ಐದು ಬಾರಿಯಾದರೂ ಊಟ ಮಾಡಲೇ ಬೇಕು. ಅದು ಸಾಧ್ಯವಾಗಿಲ್ಲವೆಂದರೆ ಕನಿಷ್ಟ ಮೂರು ಬಾರಿಯಾದರೂ ಊಟವನ್ನು ಮಾಡಲೇ ಬೇಕಾಗುತ್ತದೆ. ದೇಹದ ಆರೋಗ್ಯವನ್ನು ಕಾಪಾಡಬೇಕಿದ್ದರೆ ಐದು ಬಾರಿಯಾದರೂ ಊಟವನ್ನು ಅಭ್ಯಾಸ ಮಾಡಿಕೊಳ್ಳಿ. ಬ್ರೇಕ್ಫಾಸ್ಟ್, ಲಂಚ್, ಡಿನ್ನರ್ ಪ್ರಮುಖ ಊಟಗಳಾಗಿದ್ದರೆ ಮತ್ತೆರಡು ಸಣ್ಣ ಪ್ರಮಾಣದಲ್ಲಿ ಏನನ್ನಾದರೂ ಸೇವಿಸಬಹುದು. ಆದರೆ ಪೌಷ್ಠಿಕಾಂಶವುಳ್ಳ ಆಹಾರವನ್ನೇ ಸೇವಿಸಿ. ಆಗಾಗ ಏನಾದರೂ ತಿನ್ನುವುದು ನಿಮ್ಮ ಹಸಿವನ್ನು ತಡೆಯುತ್ತದೆ. ಮಾತ್ರವಲ್ಲದೆ ಶಕ್ತಿಯನ್ನು ವೃದ್ಧಿಸುವಂತೆ ಮಾಡುತ್ತದೆ. ಇತರ ಜತೆಗೆ ಸೌತೆ ಕಾಯಿ ಮತ್ತು ಇತರ ತಾಜಾ ಹಣ್ಣುಗಳ ಸೇವನೆಯು ನಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಸೇಬು, ಕಲ್ಲಂಗಡಿ, ಕಿತ್ತಳೆ, ಮುಸುಂಬಿ, ಪಪ್ಪಾಯ ಮುಂತಾದ ಹಣ್ಣನ್ನು ಸೇವಿಸಿದರೆ ತುಂಬಾ ಒಳ್ಳೆಯದು.
ದೇಹದ ತೂಕದ ಮೇಲೆ ಕಣ್ಣಿಡಿ
ನೀಮ್ಮ ಆಹಾರ ಸೇವನೆ ಎಷ್ಟೇ ಆಗಿದ್ದರೂ ಆಗಾಗ ನಿಮ್ಮ ತೂಕವನ್ನು ಪರೀಕ್ಷಿಸಿ ಕೊಳ್ಳಿ. ಕೆಲವೊಂದು ಸಲ ನಮ್ಮ ಆಹಾರ ಸೇವನೆಯು ದೇಹದ ತೂಕದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಇರುತ್ತದೆ. ಬೊಜ್ಜು ಸಮಸ್ಯೆ ಬಾರದಂತೆ ಮುಂಜಾಗೃತ ಕ್ರಮ ವಹಿಸಿ. ಅಧಿಕ ಬೊಜ್ಜು ಕೂಡ ಒಳ್ಳೆಯದಲ್ಲ. ಅತಿಯಾದ ದೇಹದ ತೂಕ ಹಾಗೂ ಅಧಿಕ ಬೊಜ್ಜು ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡಕ್ಕೆ ದಾರಿ ಮಾಡಿ ಕೊಡಬಹುದು.
ಹಸಿರು ಸೊಪ್ಪು , ತರಕಾರಿ
ಹಸಿರು ಸೊಪ್ಪು ತರಕಾರಿಗಳನ್ನು ಸೇವಿಸುವುದರಿಂದ ಸಸ್ಯ ಮೂಲಗಳ ಪ್ರೋಟಿನ್ ಗಳು ನಮ್ಮ ಶರೀರಕ್ಕೆ ಹೇರಳವಾಗಿ ಸಿಗುತ್ತದೆ. ನಮ್ಮ ಆಯುಷ್ಯವನ್ನೇ ವೃದ್ಧಿಮಾಡುವಂತಹ ಹಲವಾರು ಸತ್ವಗಳು ಸೊಪ್ಪು ತರಕಾರಿಗಳಲ್ಲಿವೆ. ಅವುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿಯು ನಮ್ಮ ದೇಹದಲ್ಲಿ ಹೆಚ್ಚುತ್ತಾ ಹೋಗುತ್ತದೆ. ಸರಿಯಾದ ಆಹಾರ ಸೇವನೆ ಹಾಗೂ ಆಹಾರ ಕ್ರಮದ ಬಗ್ಗೆ ತಿಳಿಯದ ನಮ್ಮ ಆರೋಗ್ಯವನ್ನು ನಾವೇ ಕೆಡಿಸಿ ಕೊಳ್ಳುವ ಬದಲು ನಮ್ಮ ಆರೋಗ್ಯ ಚೆನ್ನಾಗಿರಲು ನಾವು ಏನೇನು ಮಾಡಬೇಕೆಂದು ನಾವು ತಿಳಿದುಕೊಳ್ಳುವುದು ಒಳಿತು. ಹೀಗೆ ಮಾಡಿದರೆ ನಾವು ಆಸ್ಪತ್ರಗೆ ಹೋಗಿ ಹಣ ವ್ಯಯ ಮಾಡುವುದು ತಪ್ಪುತ್ತದೆ. ಈ ಹಸಿರು ಸೊಪ್ಪು ತರಕಾರಿಯನ್ನು ಈಗ ಟೆರೆಸ್ ಗಳಲ್ಲೂ ಬೆಳೆಯುವವರು ಇದ್ದಾರೆ. ಮನೆಯಲ್ಲೇ ಬೆಳೆದ ಸೊಪ್ಪು ,ತರಕಾರಿ ಉತ್ತಮ ಗುಣ ಮಟ್ಟದಿಂದಲೂ ಕೂಡಿರುತ್ತದೆ.
ಜಂಕ್ ಫುಡ್ ಸಹವಾಸ ಬೇಡ
ಇದೀಗ ಎಲ್ಲೆಲ್ಲೂ ಜಂಕ್ ಫುಡ್ ಗಳದ್ದೇ ಹಾವಳಿ. ಇವುಗಳ ಮೋಹಕತೆಗೆ ಬಲಿಯಾಗದವರ ಸಂಖ್ಯೆ ವಿರಳ. ಮಕ್ಕಳು ಮಾತ್ರವಲ್ಲ ಹಿರಿಯರು ಕೂಡ ಇವುಗಳ ರುಚಿಗೆ ಮಾರು ಹೋಗಿದ್ದಾರೆ. ನಗರಗಳಲ್ಲಂತೂ ಇವುಗಳ ಅಬ್ಬರ ಇನ್ನೂ ಜೋರಾಗಿದೆ. ಸಾಮಾನ್ಯವಾಗಿ ಜಂಕ್ ಫುಡ್ ಗಳಲ್ಲಿ ಎಣ್ಣೆ ಅಂಶ ಹೆಚ್ಚಾಗಿರುತ್ತದೆ. ಇವು ಬೊಜ್ಜಿಗೆ ಕಾರಣವಾಗುತ್ತದೆ. ಬೊಜ್ಜಿನಿಂದ ಅನೇಕ ಕಾಯಿಲೆಗಳು ಆವರಿಸಿ ಕೊಳ್ಳುತ್ತವೆ. ಅದಕ್ಕಾಗಿ ನೀವು ಜಂಕ್ ಫುಡ್ ಪ್ರಿಯರಾಗಿದ್ದರೆ ಆದಷ್ಟು ಅದರಿಂದ ಸ್ವಲ್ಪ ದೂರವಿರುವುದು ಒಳ್ಳೆಯದು. ಇದರ ಬದಲು ಮನೆ ತಿಂಡಿಗಳನ್ನು ಸೇವಿಸಿ. ಯಥೇಚ್ಛವಾಗಿ ದ್ರವಾಹಾರ, ಎಳ ನೀರು, ಹಣ್ಣಿನ ರಸ, ನಿಂಬೆ ಶರಬತ್ತು, ಮುಂತಾದುವುಗಳನ್ನು ಸೇವಿಸುವುದು ಉತ್ತಮ. ಪ್ರತಿದಿನ ಕನಿಷ್ಠ ಮೂರು ಲೀಟರ್ ನೀರು ಸೇವಿಸಿ ಆರೋಗ್ಯ ಕಾಪಾಡಿ ಕೊಳ್ಳಿ. ಉತ್ತಮ ಗುಣಮಟ್ಟದ ಆಹಾರ ಸೇವಿಸಿ.
ನೀವು ಸೇವಿಸುವ ಆಹಾರದ ಗುಣಮಟ್ಟ ಕೆಲಸದಲ್ಲಿ ನಿಮ್ಮ ದಕ್ಷತೆಯನ್ನು ತೋರಿಸುತ್ತದೆ. ರಾಗಿ,ಗೋಧಿ,ಜೋಳ ಹಾಗೂ ಪಾಲಿಶ್ ಮಾಡದ ಅಕ್ಕಿ ನಮ್ಮ ಆರೋಗ್ಯವನ್ನು ಸದಾ ಕಾಪಾಡುತ್ತದೆ. ಹೀಗೆ ಚಿಕ್ಕಪುಟ್ಟ ಸೂತ್ರಗಳನ್ನು ದೈನಂದಿನ ಆಹಾರಕ್ರಮದಲ್ಲಿ ಆಳವಡಿಸಿಕೊಂಡರೆ ನೀವು ಯಾವಾಗಲೂ, ಯಾವತ್ತೂ ಆರೋಗ್ಯದಿಂದಿರಲು ಸಾಧ್ಯ.