ಚಳಿಗಾಲ ಮತ್ತು ಫ್ಯಾಶನ್
March 4, 2019#10 years challenge ನೀವು ರೆಡಿನಾ?
March 8, 2019ಪೈಲ್ವಾನ್ ಗೆ ಕಿಚ್ಚ ಫ್ಯಾನ್ಸ್ ಫಿದಾ
– ಚಿತ್ರರಂಗದ ದಿಗ್ಗಜರಿಂದಲೂ ಕಿಚ್ಚನಿಗೆ ಶುಭಾಶಯ
– 7 ಭಾಷೆಗಳಲ್ಲಿ ರಿಲೀಸ್ ಆಗಲಿರುವ ಸಿನಿಮಾ
ಡಿಸೆಂಬರ್ ನಲ್ಲಿ ಕೆಜಿಎಫ್ ಸಿನಿಮಾ ರಿಲೀಸ್ ಆಗಿದ್ದೆ ಆಗಿದ್ದು ಎಲ್ಲಿ ಹೋದರಲ್ಲಿ ಆ ಚಿತ್ರದ್ದೇ ಹೆಸರು ಕೇಳಿ ಬರುತ್ತಿತ್ತು. ಇದೀಗ ಜನವರಿ ತಿಂಗಳಲ್ಲಿ 2 ಚಿತ್ರಗಳ ಹೆಸರು ಕೇಳಿ ಬರುತ್ತಿವೆ. ಒಂದು ನಟ ದರ್ಶನ್ ಅಭಿನಯದ ಯಜಮಾನ ಚಿತ್ರವಾದರೆ ಮತ್ತೊಂದು ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ. ಈ ಚಿತ್ರದ ಸಣ್ಣ ಟೀಸರ್ ಯೂ ಟ್ಯೂಬ್ ನಲ್ಲಿ ಬಿಡುಗಡೆ ಆಗಿದ್ದೇ ತಡ, ವೀಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಷ್ಟರ ಮಟ್ಟಿಗೆ ಯೂ ಟ್ಯೂಬ್ ನಲ್ಲಿ ಹವಾ ಕ್ರಿಯೆಟ್ ಮಾಡುತ್ತಿದೆ.
ಪೈಲ್ವಾನ್ ಗೆ ಫುಲ್ ಫಿದಾ
ಅಭಿನಯ ಚಕ್ರವರ್ತಿ ಸುದೀಪ್ ಅಭಿನಯಿಸಿರುವ ಪೈಲ್ವಾನ್ ಚಿತ್ರದ ಟೀಸರ್ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ಈ ಚಿತ್ರದ ಟೀಸರ್ ನದ್ದೇ ಸುದ್ದಿ. ಅದರಲ್ಲೂ ಕಿಚ್ಚ ಅಭಿಮಾನಿಗಳಂತೂ ಹಬ್ಬ ಆಚರಿಸುವಷ್ಟು ಸಂಭ್ರಮದಲ್ಲಿದ್ದಾರೆ. ಸುದೀಪ್ ಅಭಿನಯದ ಚಿತ್ರ ಫೈಲ್ವಾನ್ ಗೆ ಅಪಾರ ಸಂಖ್ಯೆಯಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ಟೀಸರ್ ವೀಕ್ಷಿಸಿದ ಚಿತ್ರರಂಗದ ಗಣ್ಯರು ಕೂಡ ಫೀದಾ ಆಗಿದ್ದಾರೆ. ಮಾತ್ರವಲ್ಲ ಚಿತ್ರಕ್ಕೆ ಶುಭವಾಗಲೆಂದು ಹಾರೈಸಿದ್ದಾರೆ. ಹೀಗೆ ಎಲ್ಲೆಡೆಯೂ ಚಿತ್ರದ ಕುರಿತಂತೆ ಒಳ್ಳೆಯ ಅಭಿಪ್ರಾಯಗಳು ಮೂಡಿ ಬಂದಿವೆ.
ಪೈಲ್ವಾನ್ ನನ್ನು ಕೊಂಡಾಡಿದ ಸುಲ್ತಾನ
ಕೆಜಿಎಫ್ ದಾಖಲೆಯನ್ನೇ ಮೀರಿ ನಿಲ್ಲುತ್ತದೆ ಎನ್ನಲಾಗಿರುವ ಈ ಸಿನಿಮಾದ ಬಗ್ಗೆ ಇಡೀ ಚಿತ್ರರಂಗವೇ ಮಾತಾನಾಡಿ ಕೊಳ್ಳುತ್ತಿವೆ. ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಜತೆಗೆ ಬಾಲಿವುಡ್ ಕೂಡ ಕಿಚ್ಚನ ಅಭಿನಯಕ್ಕೆ ವಾರೆವ್ಹಾ ಎನ್ನುತ್ತಿವೆ. ಪೈಲ್ವಾನ್ ನಟನೆಗೆ ಸ್ವತಃ ಬಾಲಿವುಡ್ ನಟ ಸಲ್ಮಾನ್ ಖಾನ್ ಫಿದಾ ಆಗಿದ್ದಾರೆ. ಟೀಸರ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಟ್ವಿಟರ್ ಖಾತೆಯಲ್ಲಿ ಪೈಲ್ವಾನ್ ಟೀಸರ್ ಲಿಂಕ್ ಮಾಡಿ ಶೇರ್ ಮಾಡುತ್ತಾ ಸುದೀಪ್ ಅವರ ಅಭಿನಯವನ್ನು ಹೊಗಳಿದ್ದಾರೆ. ಸಲ್ಮಾನ್ ಖಾನ್ ಅವರ ಪ್ರತಿಕ್ರಿಯೆಗೆ ಸುದೀಪ್ ಅವರು ಇದು ನಿಜಾನಾ ಎಂದು ಆಶ್ಚರ್ಯ ವ್ಯಕ್ತ ಪಡಿಸಿದ್ದು ಮಾತ್ರವಲ್ಲದೇ ಸಲ್ಲು ಭಾಯ್ ಟ್ವೀಟ್ ಗೆ ಧನ್ಯವಾದಗಳು ಎಂದು ರೀ ಟ್ವೀಟ್ ಮಾಡಿದ್ದಾರೆ.
7 ಭಾಷೆಗಳಲ್ಲಿ ಅಬ್ಬರಿಸಲಿರುವ ಪೈಲ್ವಾನ್
ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಒಟ್ಟು ಐದು ಭಾಷೆಗಳಲ್ಲಿ ರೀಲಿಸ್ ಆಗಿತ್ತು. ಕೆಜಿಎಫ್ ಚಿತ್ರವು ಕನ್ನಡ ಸಿನಿಮಾರಂಗದಲ್ಲೇ ಹೊಸ ದಾಖಲೆ ಬರೆದ ಚಿತ್ರವಾಗಿತ್ತು. ಭಾರತದ ಐದು ಭಾಷೆಗಳಲ್ಲಿ ತೆರೆ ಕಂಡ ಚಿತ್ರ ಸಿಕ್ಕಾ ಪಟ್ಟೆ ಕ್ರೇಜ್ ಹುಟ್ಟಿಸಿತ್ತು. ಈಗಲೂ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿರುವ ಈ ಚಿತ್ರವನ್ನು ನೋಡಿ ಚಿತ್ರಪ್ರೇಮಿಗಳು ಈ ವಿಭಿನ್ನ ಪ್ರಯತ್ನಕ್ಕೆ ಭೇಶ್ ಎನ್ನುತ್ತಿದ್ದಾರೆ. ಇದರ ಬೆನ್ನಲೇ ಪೈಲ್ವಾನ್ ಚಿತ್ರದ ಅಬ್ಬರವೂ ಜೋರಾಗಿ ಕೇಳುತ್ತಿದೆ. ಒಟ್ಟು 7 ಭಾಷೆಗಳಲ್ಲಿ ತೆರೆ ಕಾಣಲಿರುವ ಈ ಚಿತ್ರದ ಬಿಡುಗಡೆಗಾಗಿ ಚಿತ್ರಾಭಿಮಾನಿಗಳು ಕುತೂಹಲದಲ್ಲಿದ್ದಾರೆ. ಈ ಚಿತ್ರವು ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿ ನಿಂತಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಪೈಲ್ವಾನ್ ಚಿತ್ರತಂಡ 7 ಭಾಷೆಯಲ್ಲಿ ರಿಲೀಸ್ ಮಾಡಲು ನಿರ್ಧರಿಸಿದ್ದು, ಕೆಜಿಎಫ್ ಚಿತ್ರವೆಂದು ಹೇಳಲಾಗುತ್ತಿದೆ. ಕೆಜಿಎಫ್ ಚಿತ್ರಕ್ಕೆ ಇತರೆ ಚಿತ್ರರಂಗದಲ್ಲಿ ಭಾರಿ ಡಿಮ್ಯಾಂಡ್, ಬೆಂಬಲ ಸಿಕ್ಕಿದ್ದೆ ಇದಕ್ಕೆ ಕಾರಣ. ಈ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ಚಿತ್ರಕ್ಕಾಗಿ ದೇಹ ದಂಡಿಸಿದ ಕಿಚ್ಚ
ಚಿತ್ರದ ಟೀಸರ್ ನ್ನು ಸರಿಯಾಗಿ ಗಮನಿಸಿದ್ರೆ ಪೈಲ್ವಾನ್ ಅಂಡ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಪೈಲ್ವಾನ್ ಸಿನಿಮಾ ಅಪ್ಪಟ ದೇಸಿ ಕ್ರೀಡೆಯಾಧಾರಿತ ಸಿನಿಮಾ. ವಿಭಿನ್ನ ಚಿತ್ರಕಥೆಯನ್ನು ಒಳಗೊಂಡಿರುವ ಈ ಸಿನಿಮಾ ಬಾಲಿವುಡ್ ನ ದಂಗಲ್ ,ಸುಲ್ತಾನ್ ಚಿತ್ರಗಳಿಗಿಂತಲೂ ಭಿನ್ನವಾಗಿದೆಯಂತೆ. ಚಿತ್ರದಲ್ಲಿ ಬಾಕ್ಸಿಂಗ್ ಜತೆಗೆ ದೇಸಿ ಕ್ರೀಡೆ ಕುಸ್ತಿನೂ ಇದೆ ಎನ್ನುತ್ತವೆ ಚಿತ್ರತಂಡ. ಈ ಡಿಫರೆಂಟ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರ ಡಿಫರೆಂಟ್ ಲುಕ್ ಎಲ್ಲರನ್ನು ಬೆರಗಾಗಿಸುವಂತೆ ಮಾಡಿದೆ. ಅಪ್ಪಟ ದೇಸಿ ಸ್ಟೈಲ್ ನಲ್ಲಿ ಕುಸ್ತಿ ಪಟುವಾಗಿ ಕಾಣುತ್ತಿರುವ ಪೈಲ್ವಾನ್ ನ ವರ್ಕೌಟ್ ಅದ್ಭುತವೆಂದೆನಿಸುತ್ತದೆ. ಅವರ ಸಿನಿ ಪ್ರಯಾಣದಲ್ಲಿ ಇದೇ ಮೊದಲ ಬಾರಿಗೆ ಬರೋಬ್ಬರಿ 8ರಿಂದ 9 ತಿಂಗಳ ಕಾಲ ವರ್ಕೌಟ್ ಮಾಡಿ ದೇಹವನ್ನು ದಂಡಿಸಿದ್ದಾರೆ.
ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್
ಈ ಚಿತ್ರದ ಇನ್ನೊಂದು ವಿಶೇಷವೆಂದರೆ ಗಜಕೇಸರಿ , ಮುಂಗಾರು ಮಳೆ ಮುಂತಾದ ಕನ್ನಡದ ಹಿಟ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಕೃಷ್ಣ ಈ ಚಿತ್ರಕ್ಕೆ ನಿರ್ಮಿಸುವುದರೊಂದಿಗೆ ನಿರ್ದೇಶನವನ್ನು ಮಾಡುತ್ತಿದ್ದಾರೆ. ಜತೆಗೆ ಹಾಲಿವುಡ್ ನ ಬಾಕ್ಸಿಂಗ್ ಸ್ಟಂಟ್ ಮಾಸ್ಟರ್ ಲಾರ್ನೆಲ್ ಸ್ಟೋವೆಲ್ ಪೈಲ್ವಾನ್ ಚಿತ್ರದ ಬಾಕ್ಸಿಂಗ್ ಸೀನ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಹೆಚ್ಚಿನ ವಾರಿಯರ್ ಸಿನಿಮಾಗಳಿಗೆ ಸ್ಟಂಟ್ ಹೇಳಿಕೊಟ್ಟಿದ್ದ ಲಾರ್ನೆಲ್ ಸ್ಟೋವೆಲ್ ಈ ಚಿತ್ರದಲ್ಲಿಯೂ ಸುದೀಪ್ ಗೆ ಕುಸ್ತಿ ಹಾಗೂ ಬಾಕ್ಸಿಂಗ್ ಕಲೆಗಳ ಬಗ್ಗೆ ಹೇಳಿ ಕೊಡುವುದರ ಮೂಲಕ ಚಿತ್ರ ಅದ್ದೂರಿಯಾಗಿ ಹೊರಬರಲು ಸಹಕರಿಸಿದ್ದಾರೆ. ಚಿತ್ರಕ್ಕೆ ಆಕಾಂಕ್ಷ ಸಿಂಗ್ ನಾಯಕಿಯಾದರೆ, ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ
ಮಾರ್ಚ್ 25ಕ್ಕೆ ರಿಲೀಸ್
ಎಲ್ಲವೂ ಅಂದು ಕೊಂಡಂತೆ ಆದರೆ ಪೈಲ್ವಾನ್ ಚಿತ್ರವು ಮಾರ್ಚ್ 25ಕ್ಕೆ ರಿಲೀಸ್ ಆಗಲು ಎಲ್ಲಾ ಸಿದ್ದತೆಗಳು ನಡೆಯುತ್ತಿವೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲು ಸಜ್ಜಾಗಿದೆ. ಕಿಚ್ಚ ಸುದೀಪ್ ಅವರು ಈಗಾಗ್ಲೇ ತಮಿಳು, ತೆಲುಗು, ಹಿಂದಿಯಲ್ಲೂ ಅಭಿನಯಿಸಿದ್ದರಿಂದಲೂ ಅಲ್ಲಿನ ಅಭಿಮಾನಿಗಳು ಪೈಲ್ವಾನ್ ಟೀಸರ್ ನೋಡಿ ಫುಲ್ ಖುಷ್ ಆಗಿದ್ದಾರೆ. ಸಿನಿಮಾ ಬಿಡುಗಡೆ ಯಾವಾಗ ಎಂದು ದಿನ ಎಣಿಕೆ ಮಾಡುತ್ತಿದ್ದಾರೆ. ಈಗಾಗ್ಲೇ ನಲವತ್ತು ಲಕ್ಷವನ್ನು ಮಿಕ್ಕಿ ವೀಕ್ಷಕರನ್ನು ಹೊಂದಿರುವ ಈ ಟೀಸರ್ ಚಿತ್ರ ಪ್ರೇಮಿಗಳಲ್ಲಿ ರೋಮಾಂಚನ ಹುಟ್ಟಿಸಿದೆ. ಅಲ್ಲದೇ ಕನ್ನಡದ ಈ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡುವುದು ಗ್ಯಾರಂಟಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಕಿಚ್ಚನ ಲುಕ್ ಗೆ ಪತ್ನಿ ಪ್ರಿಯ ಮೆಚ್ಚುಗೆ
ಸುದೀಪ್ ಅವರ ಪೈಲ್ವಾನ್ ಲುಕ್ ಕಂಡು ಪತ್ನಿ ಪ್ರಿಯಾ ರಾಧಾ ಕೃಷ್ಣ ಅವರು ಕೂಡ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ. ಸುದೀಪ್ ಅವರನ್ನು ಈ ಲುಕ್ ನಲ್ಲಿ ನೋಡುತ್ತೇನೆಂದು ಊಹೆ ಮಾಡಿಯೂ ಇರಲಿಲ್ಲ. ಅವರಲ್ಲಿರುವ ಶಕ್ತಿ, ಆತ್ಮಸ್ಥೈರ್ಯ,ಶ್ರದ್ಧೆ ಇಂದು ಪೈಲ್ವಾನ್ ನಲ್ಲಿ ಕಾಣುತ್ತಿದ್ದೇವೆ ಎಂದು ಪ್ರಿಯಾ ಹೇಳಿದ್ದಾರೆ.
ಒಟ್ಟಿನಲ್ಲಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟೀಸರ್ ಇಷ್ಟೊಂದು ಸದ್ದು ಮಾಡಿದರೆ , ಚಿತ್ರದ ಅಬ್ಬರ ಹೇಗಿರ ಬಹುದು ಎನ್ನುವ ಕುತೂಹಲ ಜನರಲ್ಲಿದೆ. ಈ ಹಿಂದೆ ಭಾರೀ ಸದ್ದು ಮಾಡಿದ ಕೆಜಿಎಫ್ ಚಿತ್ರವನ್ನು ಹಿಂದಿಕ್ಕಿ ಈ ಚಿತ್ರ ಮುನ್ನುಗ್ಗುತ್ತಾ ಕಾದು ನೋಡ ಬೇಕು.