ದಿ ರೀನಾ ಡಿಸೋಜ ಶೋ: ಯಜುವೇಂದ್ರ ಚಹಲ್ ಸಿಂಗ್
February 6, 2019ಹಳೆ ಫ್ಯಾಶನ್ ಏಕೆ ? ಹೊಸತನ್ನು ಟ್ರೈ ಮಾಡಿ …
February 10, 2019ರೀನಾ ಡಿಸೋಜಾ ಶೋದಲ್ಲಿ ಕ್ರಿಕೆಟಿಗ ಮೊಹಮ್ಮದ್ ಸಿರಾಜ್
-ಆಟೋ ರಾಜನ ಮಗನ ಕ್ರಿಕೆಟ್ ಜರ್ನಿಯ ಕುರಿತಂತೆ ಚಿಟ್ ಚಾಟ್
-ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಅಚ್ಚರಿಯ ಸಂಗತಿ ಬಿಚ್ಚಿಟ್ಟ ವೇಗಿ
ಸಿನಿಮಾ ತಾರೆಯರ ಮಕ್ಕಳು ನಟರಾಗುವುದು ,ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಇಳಿಯುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಆಟೋ ಡ್ರೈವರ್ ಮಗ ಕ್ರಿಕೆಟ್ ನಲ್ಲಿ ಅಪ್ರತಿಮ ಸಾಧನೆ ಮಾಡಿ ವಿಶ್ವದಲ್ಲಿಯೇ ಗುರುತಿಸಿ ಕೊಂಡಿದ್ದಾರೆ. ಆತ ಮತ್ಯಾರು ಅಲ್ಲ ದೇಶಿ ಕ್ರಿಕೆಟ್ ನಲ್ಲಿ ಮಿಂಚಿ,ಐಪಿಎಲ್ ನಲ್ಲಿ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿ ಭಾರತ ಟಿ20 ತಂಡದಲ್ಲೂ ಅಮೋಘ ಪ್ರದರ್ಶನ ನೀಡಿರುವ ವೇಗಿ ಮೊಹಮ್ಮದ್ ಸಿರಾಜ್.
ವಯಸ್ಸು 24. ಹೈದರಾಬಾದ್ ಮೂಲದವರು. ಬಾಲ್ಯದಲ್ಲೇ ಕ್ರಿಕೆಟ್ ಬಗೆಗಿನ ಅಗಾಧ ಪ್ರೀತಿ,ಕಿರಿಯರ ತಂಡದಿಂದ ರಣಜಿಯವರೆಗೆ ಐಪಿಎಲ್ ನಿಂದ ಭಾರತ ತಂಡದವರೆಗೆ, ಹೀಗೆ ಸಿರಾಜ್ ಸಾಧಕರಾಗಿ ಯುವ ಜನತೆಗೆ ಮಾದರಿಯಾಗಿದ್ದಾರೆ. ಬಡತನ,ನೋವು,ನಲಿವುಗಳನ್ನುಂಡು ಸಾಧನೆಯ ಶಿಖರವನ್ನೇರಿದ್ದಾರೆ. ಯಶಸ್ವಿ ಕ್ರಿಕೆಟಿಗ ರೀನಾ ಡಿಸೋಜಾ ಶೋ ಎಪಿಸೋಡ್ -2 ವೆಬ್ ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ನಿರೂಪಕಿ ರೀನಾ ಅವರ ಎಲ್ಲಾ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿದ್ದಾರೆ. ಅವರಿಬ್ಬರ ನಡುವಿನ ಸಂದರ್ಶನದ ಪೂರ್ಣ ವಿವರ ಇಲ್ಲಿದೆ.
ಸಂದರ್ಶನದಲ್ಲಿ ಸಿರಾಜ್ ಹೇಳಿದ್ದೇನು?
ನಾನು ಏಳನೇ ವಯಸ್ಸಿನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದೆ. ಈ ಮೂಲಕ ಕ್ರೀಡಾರಂಗಕ್ಕೆ ಪಾದಾರ್ಪಣೆ ಮಾಡಿದೆ. ಇದಾದ ಬಳಿಕ ಪ್ರಮುಖ ಕ್ರಿಕೆಟ್ ಟೂರ್ನಿ ಗಳಲ್ಲಿ ಭಾಗವಹಿಸಿದೆ. ಒಳ್ಳೆ ವಿಕೆಟ್ ಕೂಡ ಸಿಕ್ಕಿತು. ಅಂಡರ್ 23 ಕ್ರಿಕೆಟ್ ಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದೆ. ಇದಾದ ಬಳಿಕ ರಣಜಿ ಮ್ಯಾಚ್ ಗೆ ಆಯ್ಕೆಯಾದೆ. ಪ್ರಥಮ ಪಂದ್ಯದಲ್ಲಿ ಕೇವಲ ಒಂದು ವಿಕೆಟ್ ಅಷ್ಟೇ ಸಿಕ್ಕಿತು. ಇದಾದ ಬಳಿಕ ಪಿಯುಸಿ ಶಿಕ್ಷಣ ಮುಗಿಸಿದೆ. ಅಚ್ಚರಿ ಎಂಬಂತೆ ಐಪಿಎಲ್ ಗೆ ಆಯ್ಕೆಯಾದೆ. ಅದು ಕೂಡ ಬರೋಬ್ಬರಿ 2.6 ಕೋಟಿ ರೂ.ಗೆ. ಅಷ್ಟೊಂದು ಹಣ…! ನನ್ನನ್ನೇ ನಾನು ನಂಬಲಿಲ್ಲ. ಏಕೆಂದರೆ ಐಪಿಎಲ್ ಗೆ ಆಯ್ಕೆಯಾಗುವ ಮೊದಲು ನಾನು ಆರ್ ಸಿ ಬಿ ತಂಡಕ್ಕೆ ನೆಟ್ ನಲ್ಲಿ ಬೌಲಿಂಗ್ ಮಾಡಿದ್ದೆ. ಆರ್ ಸಿ ಬಿ ಕೋಚ್ ಭರತ್ ಅರುಣ್ ನನ್ನ ಆಟ ನೋಡಿ ಮೆಚ್ಚಿ ಕೊಂಡಿದ್ದರು. ನಾನು ನಿನ್ನ ಬಗ್ಗೆ ಲಕ್ಷ್ಮಣ್ ಸರ್( ಮಾಜಿ ಕ್ರಿಕೆಟಿಗ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಸಲಹೆಗಾರರು ) ಜತೆ ಮಾತನಾಡುತ್ತೇನೆ ಅಂದರು. ಆದರೆ ಲಕ್ಷ್ಮಣ್ ಸರ್ ಅವರಿಗೆ ನನ್ನ ಬಗ್ಗೆ ತಿಳಿದಿರಲಿಲ್ಲ. ಮರು ವರ್ಷವೇ ಸನ್ ರೈಸರ್ ಹೈದರಾಬಾದ್ ತಂಡಕ್ಕೆ ಆಯ್ಕೆಯಾದೆ. ಲಕ್ಷ್ಮಣ್ ಹಾಗೂ ಭರತ್ ಸರ್ ನನ್ನ ಪ್ರದರ್ಶನದಿಂದ ಸಾಕಷ್ಟು ಸಂತೋಷಗೊಂಡಿದ್ದರು. ಹರಾಜು ವೇಳೆ ನನ್ನ ಹೆಸರು ಟಿವಿಯಲ್ಲಿ ಬರುತ್ತಿತ್ತು. ನನಗಾಗಿ ಸನ್ ರೈಸರ್ಸ್ ಮತ್ತು ಆರ್ ಸಿ ಬಿ ತಂಡಗಳ ನಡುವೆ ಪೈಪೋಟಿ ಶುರುವಾಯಿತು. ನಾನು 2.6 ಕೋಟಿಗೆ ಹರಾಜುಗೊಂಡೆ ಎಂದರು.
ಜೀವನದಲ್ಲಿ 500 ರೂ. ಮಾತ್ರ ಕಂಡಿದ್ದೆ:
ನಾನು ಕ್ರಿಕೆಟ್ ಆಡೋ ಹೊತ್ತಿಗೆ ಮಾಮನ ಜತೆ ಹೋಗುತ್ತಿದ್ದೆ. ಅವರ ಜತೆ ಆಟ ಆಡುತ್ತಿದ್ದೆ. ಅವರು ನನಗೆ 500 ರೂ. ನೀಡುತ್ತಿದ್ದರು. ಇದು ನನಗೆ ತುಂಬಾ ಪ್ರಯೋಜನಕ್ಕೆ ಬರುತ್ತಿತ್ತು. ಅಪ್ಪ ಅಟೋ ಬಿಡುತ್ತಿದ್ದರು. ನನಗೆ 70 ರೂ. ಪಾಕೆಟ್ ಮನಿ ನೀಡುತ್ತಿದ್ದರು. ಅಣ್ಣ ಇಂಜಿನೀಯರಿಂಗ್ ಓದುತ್ತಿದ್ದ. ಹೀಗಾಗಿ ಬಸ್ ನಲ್ಲಿ ಪ್ರಯಾಣಿಸಬೇಕಿತ್ತು. ಆತನಿಗೆ ಅಪ್ಪ100 ರೂ. ನೀಡುತ್ತಿದ್ದರು. ನಾನು ಪ್ರಾಕ್ಟೀಸ್ ಗೆ ಬೈಕ್ ನಲ್ಲಿ ಹೋಗುತ್ತಿದ್ದೆ. ಪೆಟ್ರೋಲ್ ಗಾಗಿ 60 ರೂ.ಬೇಕಾಗುತ್ತಿತ್ತು. 10 ರೂ. ನಂಗೆ ಉಳಿಯುತ್ತಿತ್ತು. ಒಂದೊಂದು ದಿನ ಬೈಕ್ ಗೆ ಏನಾದರೂ ಸಮಸ್ಯೆ ಆದರೆ ಉಳಿತಾಯದ ಹಣವನ್ನೇ ಖರ್ಚು ಮಾಡಬೇಕಾದ ಪರಿಸ್ಥಿತಿ ಬರುತ್ತಿತ್ತು” ಎಂದು ಆ ದಿನಗಳನ್ನು ಮೆಲುಕು ಹಾಕಿದರು.
ದುಡ್ಡು ಇಡಲು ಜಾಗ ನೀಡಿ :
ಅಧ್ಯಯನದಲ್ಲಿ ಹಿಂದೆ ಇದ್ದ ನನ್ನ ಮೇಲೆ ಅಮ್ಮನಿಗೆ ಅಸಮಾಧಾನವಿತ್ತು. ಅವರು ಯಾವಾಗಲೂ ಅಣ್ಣನ ಉದಾಹರಣೆ ನೀಡುತ್ತಿದ್ದರು. ನಿನ್ನಣ್ಣ ಇಂಜಿನೀಯರ್ ಓದುತ್ತಿದ್ದಾನೆ, ನೀನೇನು ಮಾಡುತ್ತಿದ್ದಿಯಾ? ಎಂದು ಕೇಳುತ್ತಿದ್ದರು. ಆಗ ನಾನು ಅಮ್ಮನಿಗೆ ಒಂದಲ್ಲ ಒಂದು ದಿನ ದುಡ್ಡು ಸಂಪಾದಿಸುತ್ತೇನೆ. ನನಗೆ ದುಡ್ಡು ಇಡಲು ಜಾಗ ನೀಡಿ ಎನ್ನುತ್ತಿದ್ದೆ. ನೋಡೋಣ ಏನು ಮಾಡ್ತೀಯಾ ಎಂದು,ಆಮೇಲೆ ಗೊತ್ತಾಗುತ್ತೆ ಎಂದು ಅಮ್ಮ ಪ್ರತಿಕ್ರಿಯಿಸುತ್ತಿದ್ದರು. ಅಮ್ಮ ಅಣ್ಣನ ಉದಾಹರಣೆ ಕೊಟ್ಟಾಗಲೆಲ್ಲ ನಾನು ಈ ಡಯಲಾಗ್ ಹೊಡೆಯುತ್ತಿದ್ದೆ. ಅವತ್ತು ಹೇಳಿದ ಆ ಮಾತು ಇಂದು ನಿಜವಾಯಿತು ನೋಡಿ. ಕೋಟಿ ಹಣದವರೆಗೆ ಸಂಪಾದಿಸಿದೆ. ಇನ್ನು ಕಾರ್ ಖರೀದಿಸಬೇಕೆನ್ನುವುದು ನನ್ನ ಕನಸಾಗಿತ್ತು. ಅದು ಕೂಡ ನಿಜವಾಗಿದೆ.
ವಿರಾಟರನ್ನೇ ನೋಡುತ್ತಿದ್ದೆ:
ನಾನೆಂದು ವಿರಾಟ್ ಕೊಹ್ಲಿಯನ್ನು ಮುಖತಃ ನೋಡಿದವನಲ್ಲ. ನಾನು ಟಿವಿಯಲ್ಲಿ ಮಾತ್ರ ನೋಡಿದ್ದೆ. ಇಂಡಿಯಾ ಟೀಂಗೆ ಸೆಲೆಕ್ಟ್ ಆಗುವ ಹೊತ್ತಿಗೆ ವಿರಾಟ್ ಸರ್ ಅವರ ಪಕ್ಕದಲ್ಲೇ ಕುಳಿತುಕೊಳ್ಳುವ ಅವಕಾಶ ಸಿಕ್ಕಿತು. ಅವರನ್ನು ನೋಡಿ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ನಾನು ಅವರನ್ನೇ ದಿಟ್ಟಿಸಿ ನೋಡುತ್ತಿದ್ದೆ. ಈ ವೇಳೆ `ಅರೆ ಏನಾಗಿದೆ ಹುಡುಗ’ ಎಂದು ವಿರಾಟ್ ಸರ್ ಕೇಳಿದ್ರು. ಇಲ್ಲ ಏನು ಇಲ್ಲ ಸರ್ ಎಂದು ಅವರಿಗೆ ಉತ್ತರಿಸಿದೆ.
ಮೊದಲ ಪಂದ್ಯದಲ್ಲಿ ಭಾವಪರವಶನಾಗಿದ್ದೆ:
ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಮೊದಲ ಸಲ ಭಾರತ ತಂಡದ ಜೆರ್ಸಿ ತೊಟ್ಟಾಗ,ರಾಷ್ಟ್ರ ಗೀತೆ ಮೊಳಗಿದ್ದಾಗ ರೋಮಾಂಚನಗೊಂಡಿದ್ದೆ. ನನ್ನ ಜೀವನದ ಸಾಧನೆ ಹಾದಿಯಲ್ಲಿ ಸಾಗಿದ ಕ್ಷಣಗಳನ್ನು ನೆನೆದು ಕಣ್ಗಾವಲಿ ತೇವಗೊಂಡಿತು. ಆ ದಿನವನ್ನು ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ.
ಅಪ್ಪ ಅಮ್ಮನ ತ್ಯಾಗ ಮರೆಯುವುದುಂಟೆ?
ವೃತ್ತಿ ಜೀವನಕ್ಕಿಂತ ಕುಟುಂಬ ತುಂಬಾನೇ ಅವಶ್ಯಕ. ನಾನು ಈ ದಾರಿಗೆ ಬರಲು ಅಪ್ಪ-ಅಮ್ಮ ಎಷ್ಟೊಂದು ಕಷ್ಟ ಪಟ್ಟಿದ್ದಾರೆ. ಅವರು ಸಾಕಿದ್ದಾರೆ ಸಲಹಿದ್ದಾರೆ. ಅದನ್ನು ಮರೆಯಲು ಸಾಧ್ಯವೇ ಇಲ್ಲ. ಅವರ ತ್ಯಾಗದ ಫಲವೇ ಇಂದು ಈ ಮಟ್ಟಕ್ಕೆ ನಾನು ಬೆಳೆಯಲು ಕಾರಣ.ಅಪ್ಪನಿಗೆ ನನ್ನ ಸಾಧನೆ ಬಗ್ಗೆ ಹೆಮ್ಮೆಯಿದೆ. ಅವರು ನಮಾಜ್ ಮಾಡಲು ಹೋಗುತ್ತಿದ್ದಾಗ `ಮಹಮ್ಮದ್ ಸಿರಾಜ್ ತಂದೆ ‘ಎಂದು ಹೇಳುತ್ತಿದ್ದರಂತೆ, ಮನೆಗೆ ಬಂದು ಅವರು ನನ್ನ ಬಳಿ ಹೇಳುತ್ತಿದ್ದರು. ನನ್ನ ಹೆಸರನ್ನು ಇದೀಗ ಯಾರೂ ಹೇಳುತ್ತಿಲ್ಲ . ಈಗ ನಿನ್ನ ಹೆಸರಿನಿಂದಲೇ ನನ್ನನ್ನು ಗುರುತಿಸುತ್ತಿದ್ದಾರೆ ಎಂದು ಅಪ್ಪನ ಬಗ್ಗೆ ಮಗ ಮೆಚ್ಚುಗೆ ಮಾತುಗಳನ್ನಾಡಿದರು.
ಗೆಳೆಯರೇ ಬಂಧುಗಳು:
ಜೀವನದಲ್ಲಿ ಗೆಳೆಯರೇ ನನಗೆ ಬಂಧು ಬಳಗ ಎಲ್ಲ. ನನಗೆ ಪ್ರಯಾಣ ಮಾಡೋ ಹೊತ್ತಿಗೆ ಮೊಬೈಲ್ ನಲ್ಲಿ ಹಾಡು ಕೇಳುವುದೆಂದರೆ ತುಂಬಾ ಇಷ್ಟ .ಆಗ ನನ್ನ ಬಳಿ ಮೊಬೈಲೇ ಇರಲಿಲ್ಲ. ತುಂಬಾ ಬೇಸರಿಸಿಕೊಂಡಿದ್ದೆ. ಈ ವೇಳೆ ನನ್ನ ಗೆಳೆಯ ಹಿಂದು ಮುಂದು ನೋಡದೇ ಆತನ ಮೊಬೈಲ್ ಅನ್ನೇ ನನಗೆ ಕೊಟ್ಟ ಎಂದರು.
ಗೇಮಿಂಗ್ ಸೆಗ್ ಮೆಂಟ್
ಗ್ರೇ ನಿಕ್ಲ್ಸ್ ಪ್ರಾಯೋಜಕತ್ವದಲ್ಲಿ ಮೂಡಿ ಬಂದ ಗೇಮಿಂಗ್ ಸೆಗ್ ಮೆಂಟ್ ನಲ್ಲಿ ಸಿರಾಜ್ ಪಾಲ್ಗೊಂಡರು. ಗಾಲ್ಫ್ ಆಟದಲ್ಲಿ ಮೂರು ಅವಕಾಶಗಳನ್ನು ಪಡೆದರೂ ಸೋಲೊಪ್ಪಬೇಕಾಯಿತು. ಈ ಸಂದರ್ಭ ನಿರೂಪಕಿ ರೀನಾ ಅವರು ನೀವು ಇಲ್ಲಿ ಸೋತರೂ ಇಡೀ ದೇಶಕ್ಕೆ ನೀವ್ಯಾರೆಂದು ಗೊತ್ತಿದೆ, ಪರ್ವವಾಗಿಲ್ಲ ಬಿಡಿ ಎಂದರು. ಈ ಸಂದರ್ಭ ನಿಮ್ಮ ಗರ್ಲ್ ಫ್ರೆಂಡ್ ಯಾರು ಎಂಬ ತಮಾಷೆ ಪ್ರಶ್ನೆಯೊಂದನ್ನು ಕೇಳಲಾಯಿತು. ಈ ಪ್ರಶ್ನೆಗೆ ಸಿರಾಜ್ ಅವರಿಂದ ಯಾರೂ ಇಲ್ಲ,ಇಲ್ಲಿಯವರೆಗೆ ಯಾರೂ ಸಿಕ್ಕಿಲ್ಲ ಎಂಬ ಉತ್ತರ ಬಂತು. ನಂತರ ಸಿರಾಜ್ ಬ್ಯಾಟ್ ಗೆ ಹಸ್ತಾಕ್ಷರ ನೀಡಿದರು.
ಎಜುಕೇಟಿವ್ ಸೆಗ್ ಮೆಂಟ್
ಕ್ರೀಡಾಕ್ಷೇತ್ರದಲ್ಲಿ ಮಿಂಚಬೇಕಾದರೆ ನಾವು ಕೆಲವೊಂದು ತ್ಯಾಗ ಮಾಡ ಬೇಕಾಗುತ್ತದೆ. ರಾತ್ರಿ ಬೇಗ ಮಲಗುವುದು,ಬೆಳಗ್ಗೆ ಬೇಗ ಏಳುವುದು ರೂಢಿ ಮಾಡಿ ಕೊಳ್ಳಬೇಕು. ಹೆಚ್ಚು ಸಮಯ ಅಭ್ಯಾಸಕ್ಕೆ ನೀಡಬೇಕು. ತರಬೇತಿಯ ಅಗತ್ಯವು ಇದೆ. ಇದರೊಂದಿಗೆ ಡಯಟ್,ಅಪ್ಪ-ಅಮ್ಮನ ಬೆಂಬಲ ತುಂಬಾನೇ ಮುಖ್ಯ. ಯುವ ಕ್ರಿಕೆಟಿಗರು ಮೊದಲು ಅಕಾಡೆಮಿ ಅಸೋಸಿಯೇಶನ್ ಸೇರಿ ಕೊಂಡು ತದ ನಂತರ ಕ್ರಿಕೆಟ್ ಅಸೋಸಿಯೇಶನ್ ಸೇರಿದರೆ ಒಳಿತು ಎಂದು ಸಲಹೆ ನೀಡಿದರು.
ಫುಡ್ ಟೇಸ್ಟಿಂಗ್ ಸೆಗ್ ಮೆಂಟ್
ಇಲ್ಲಿ ಸಿರಾಜ್ ಅವರಿಗೆ ಸವಿಯಲು ಖಾದ್ಯಗಳು ರೆಡಿಯಾಗಿದ್ದವು. ಗಿಲ್ಲಿ ಸ್ಪೆಶಲ್ ಚಿಕನ್ ಸ್ಪ್ರಿಂಗ್ ರೋಲ್,ಬೇಬಿ ಕಾರ್ನ್ ಕೋಲಿವಡವನ್ನು ಸಿರಾಜ್ ಸಂತೋಷದಿಂದ ಸವಿದರು.
ರಾಪಿಡ್ ಫಾಯರ್
ಕ್ರಿಕೆಟ್ ಆಟಗಾರನಾಗಿರದಿದ್ದರೆ ನೀವು ಏನಾಗುತ್ತೀದ್ದಿರಿ?ಎಂಬ ಪ್ರಶ್ನೆಗೆ ಸಿರಾಜ್ ಉತ್ತರಿಸಿದ್ದು ಹೀಗೆ. ಕ್ರಿಕೆಟ್ ಆಟಗಾರನಾಗಿರದಿದ್ದರೆ ನಾನು ವಾಲಿಬಾಲ್ ಆಟಗಾರನಾಗುತ್ತಿದ್ದೆ ಎಂದರು.ನೀವು ಪ್ರಧಾನ ಮಂತ್ರಿಯಾದರೆ ಯಾವ ಬದಲಾವಣೆಯನ್ನು ತರುತ್ತೀರಿ ಎಂಬ ಪ್ರಶ್ನೆಯೊಂದನ್ನು ಕೇಳಲಾಯಿತು. ಇದಕ್ಕೆ ಭಾರತದಲ್ಲಿ ರಸ್ತೆ ಸಮಸ್ಯೆ ತುಂಬಾನೆ ಇದೆ. ಮೊದಲು ರೋಡ್ ಸರಿ ಮಾಡಲು ಇಚ್ಚಿಸುತ್ತೇನೆ. ಟ್ರಾಫಿಕ್ ಮತ್ತು ಪೊಲ್ಯೂಶನ್ ಸರಿ ಪಡಿಸಬೇಕು ಎಂದು ಉತ್ತರಿಸಿದರು. ಕಾರ್ಯಕ್ರಮದ ಕೊನೆ ಹಂತದಲ್ಲಿ ಸಿರಾಜ್ ಅವರಿಗೆ ಲೀವ್ ಆಕ್ಟೀವ್ ಅವರ ಕಡೆಯಿಂದ ಗಿಫ್ಟ್ ಹ್ಯಾಂಪರ್ ನೀಡಲಾಯಿತು.
– ದಯಾಮಣಿ ಹೇಮಂತ್