ಚಳಿಗಾಲದಲ್ಲಿ ಸೌಂದರ್ಯಕ್ಕೆ ಧಕ್ಕೆಯಾಗದಿರಲಿ..
January 23, 2019ಶಾರುಖ್ ರನ್ನು ನಡುಗಿಸಿತೆ ಕೆಜಿಎಫ್? – ಈಗ ರಾಕಿಂಗ್ ಸ್ಟಾರ್ ಯಶ್ ಹವಾ…
January 27, 2019ವಿಶ್ವವನ್ನೇ ಬೆರಗುಗೊಳಿಸಿದ ಮಂಡ್ಯದ ಹುಡುಗ ಡ್ರೋನ್ ಯಂತ್ರ ಸೃಷ್ಟಿಸಿದ ಯುವ ವಿಜ್ಞಾನಿ ಪ್ರತಾಪ್ ರೈತನ ಮಗನೊಬ್ಬನ ಅಂತರಾಷ್ಟ್ರೀಯ ಮಟ್ಟದ ಸಾಧನೆ
ಮನುಷ್ಯ ತಾನು ಬೆಳೆಯುವುದನ್ನೇ ಯೋಚಿಸುತ್ತಿರುತ್ತಾನೆ. ಇನ್ನು ಕೆಲವರು ಇತರರನ್ನು ತುಳಿದು ಮುಂದೆ ಬರುವ ಬಗ್ಗೆ ಆಲೋಚಿಸುತ್ತಿರುತ್ತಾರೆ. ಬರಿ ದ್ವೇಷ,ಸ್ವಾರ್ಥ,ವಂಚನೆ ತುಂಬಿರುವ ಸಮಾಜದಲ್ಲಿ ದೇಶದ ಬಗ್ಗೆ ಚಿಂತಿಸುವವರು ತೀರಾ ವಿರಳ. ಆದರೆ ಇಲ್ಲೊಬ್ಬ ಹುಡುಗ ದೇಶಕ್ಕಾಗಿ ಏನಾದರೂ ಮಾಡಬೇಕು ಎಂದು ಕನಸು ಕಾಣುತ್ತಾನೆ. ಭಾರತದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಬೇಕು ಎಂದು ತನ್ನ ತಾಯಿಯ ಮಾಂಗಲ್ಯ ಸರವನ್ನೇ ಅಡವಿಡುತ್ತಾನೆ. ತಾನು ಕಂಡ ಕನಸನ್ನು ನನಸು ಮಾಡುವಲ್ಲಿ ಆತ ಕಡೆಗೂ ಯಶಸ್ವಿಯಾದ. ದೇಶಕ್ಕಾಗಿ ಚಿನ್ನದ ಪದಕ ತಂದು ಕೊಟ್ಟ. ಹೌದು, ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆ ಹುಡುಗನೊಬ್ಬ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕುತೂಹಲಕಾರಿ ಕಥೆ ಇದು.
ಹೆಸರು ಪ್ರತಾಪ್. 22 ವರ್ಷ. ನಟ್ಕಲ್ ಗ್ರಾಮದ ಸಾಮಾನ್ಯ ರೈತ ಮರಿಮಾದಯ್ಯ -ಸವಿತಾ ದಂಪತಿಯ ಪುತ್ರ ಇಂದು ಯುವ ವಿಜ್ಞಾನಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ ಯಾರೂ ಮಾಡಿರದ ಸಾಧನೆ ಮಾಡಿ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಡ್ರೋನ್ ಯಂತ್ರವನ್ನು ಸೃಷ್ಟಿ ಮಾಡಿ ಜಪಾನ್ ನಲ್ಲಿ ಚಿನ್ನದ ಪದಕ ಗೆದ್ದು,ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅಮೇರಿಕಾ,ಜಪಾನ್ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳ ವಿದ್ಯಾರ್ಥಿಗಳಿದ್ದರೂ,ದೇಶವನ್ನು ಪ್ರತಿನಿಧಿಸಿ ವಿಶ್ವಮಟ್ಟದಲ್ಲಿ ಗುರುತಿಸಿ ಕೊಂಡಿದ್ದಾರೆ. ಯುವ ವಿಜ್ಞಾನಿಯ ಸಾಧನೆಗೆ ವಿಜ್ಞಾನ ಪಂಡಿತರೇ ಬೆರಗಾಗಿದ್ದು,ಈ ಹುಡುಗನ ಅಪ್ರತಿಮ ಸಾಧನೆಗೆ ಸಲಾಮ್ ಹೊಡೆದಿದ್ದಾರೆ.
ಹಾರಾಡುವ ಹದ್ದುಗಳೇ ಗುರಿ
ಚಿಕ್ಕಂದಿನಿಂದಲೇ ಪ್ರತಾಪ್ ವಿಜ್ಞಾನದ ಕಡೆಗೆ ಒಲವು ತೋರುತ್ತಿದ್ದರು. ದೇಶಕ್ಕೆ ಉಪಯೋಗವಾಗುವ ಸಾಧನೆಯನ್ನು ತಾನು ಮಾಡಬೇಕೆಂದು ಯೋಚಿಸುತ್ತಿದ್ದರು. ಒಂದು ದಿನ ಶಾಲೆಗೆ ಹೋಗುವ ವೇಳೆ ಆಕಾಶದಲ್ಲಿ ಹಾರಾಡುವ ಹದ್ದುಗಳನ್ನು ಗಮನಿಸಿದರು. ಅಲ್ಲಿಂದ ಅವರಿಗೆ ಉತ್ತಮ ಉಪಾಯ ಹೊಳೆಯುತ್ತೆ. ಅದುವೇ ಹದ್ದಿನ ರೀತಿ ಆಕಾಶದಲ್ಲಿ ಹಾರಾಡುವ ಒಂದು ಡ್ರೋನ್ ಸಾಧನ ಕಂಡು ಹಿಡಿಯುವುದು. ಇದಕ್ಕಾಗಿ ಪ್ರತಿ ನಿತ್ಯ ಮನೆ ಮುಂದೆ ಕುಳಿತು ಆಕಾಶದಲ್ಲಿನ ಹದ್ದುಗಳನ್ನು ವೀಕ್ಷಿಸಲು ಶುರು ಮಾಡಿದರು. ಅದರ ಜತೆ ಜತೆಗೆ ವಿಮಾನ ಹಾರಾಟವನ್ನು ಗಮನಿಸುತ್ತಿದ್ದರು. ಆಕಾಶಕಾಯಗಳ ಮೇಲೂ ಕುತೂಹಲ ತೋರಿಸುತ್ತಿದ್ದ ಇವರಿಗೆ ಶಾಲೆಯಲ್ಲೂ ಬಹುಮಾನಗಳು ಬರುತ್ತಿದ್ದವು.ಆದರೆ ಇವರ ಗುರಿ ಡ್ರೋನ್ ಸೃಷ್ಟಿಸುವುದಾಗಿತ್ತು.ಕಿತ್ತು ತಿನ್ನುವ ಬಡತನ. ಒಂದು ಹೊತ್ತಿನ ಊಟಕ್ಕು ಪರದಾಡುವ ಸ್ಥಿತಿ. ರೈತ ಕುಟುಂಬ ಆಗಿರುವುದರಿಂದ ತಂದೆ ವ್ಯವಸಾಯ ಮಾಡಿ ಮಗನನ್ನು ಓದಿಸುತ್ತಿದ್ದರು. ಈ ಕಷ್ಟಗಳ ನಡುವೆ ಡ್ರೋನ್ ಸಾಧನ ಕಂಡು ಹಿಡಿಯುವುದು ಸುಲಭದ ಮಾತಲ್ಲ. ಅದಕ್ಕೆ ತಗಲುವ ವೆಚ್ಚವನ್ನು ಭರಿಸಲು ಅವರಿರುವ ಪರಿಸ್ಥಿತಿಯಲ್ಲಿ ಖಂಡಿತ ಸಾಧ್ಯವಿಲ್ಲ. ಹಣಕ್ಕಾಗಿ ಏನು ಮಾಡಲಿ ಎಂದು ಯೋಚಿಸಿದರು. ಛಲ ಬಿಡದ ಪ್ರತಾಪ್ ತನ್ನ ಸಾಧನೆಗಾಗಿ ಜನ್ಮ ನೀಡಿದ ತಾಯಿಯ ತಾಳಿ ಸರವನ್ನೇ ಅಡವಿಟ್ಟರು. ಆರಂಭದಲ್ಲಿ ಸೋಲನ್ನನುಭವಿಸಿದರೂ ಸಾಧಿಸ ಬೇಕೆಂಬ ತುಡಿತ ಅವರನ್ನು ಪ್ರೇರೆಪಿಸುವಂತೆ ಮಾಡುತ್ತಿತ್ತು.
ಆ ಕ್ಷಣವನ್ನು ಮರೆಯಲು ಅಸಾಧ್ಯ
ಅರ್ಹತೆಗೆ ಪ್ರತಿಭೆಯೇ ಮಾನದಂಡ ಎಂಬಂತೆ ಏಳು ಬೀಳುಗಳ ಮಧ್ಯೆ ಹೋರಾಟ ಮುಂದುವರಿಸಿದರು. ಅವರಿಗೆ ಪ್ರತಿಭೆ ಬಗ್ಗೆ ಅಗಾಧ ನಂಬಿಕೆಯಿತ್ತು. ಪ್ರಯತ್ನದ ಮೇಲೆ ಪ್ರಯತ್ನ ಮಾಡುತ್ತಲೇ ಇದ್ದರು. ಒಂದು ದಿನ ಐಐಟಿ ಫ್ರೋಫೆಸರ್ ಒಬ್ಬರು ಜಪಾನ್ ನಲ್ಲಿ ನಡೆಯುವ ಸ್ಪರ್ಧೆ ಕುರಿತು ಪ್ರತಾಪ್ ಗೆ ಮಾಹಿತಿ ನೀಡಿದರು. ಸಿಕ್ಕ ಅವಕಾಶ ಮಿಸ್ ಮಾಡಲ್ಲ, ಸರಿಯಾಗಿ ಸದುಪಯೋಗ ಪಡಿಸಿಕೊಳ್ಳುತ್ತೇನೆ ಅಂದು ಕೊಂಡು ಕಾಂಪಿಟೀಶನ್ ಗೆ ಸಜ್ಜಾದರು. ತನ್ನ ಸಾಮರ್ಥ್ಯದಿಂದ ಆಯ್ಕೆಯಾದರು. ಆದರೆ ಸ್ಪರ್ಧೆಗೆ ನೇರವಾಗಿ ಹೋಗುವ ಹಾಗಿರಲಿಲ್ಲ. ಕಾಂಪಿಟೀಶನ್ ನಿಯಮದಂತೆ ಚೆನ್ನೈ ಫ್ರೋಫಸರ್ ಒಬ್ಬರ ಸಹಿಯ ಅವಶ್ಯತೆಯಿತ್ತು. ಪ್ರತಾಪ್ ಚೆನ್ನೈಗೆ ಹೋದರು.ಪ್ರೋಫೆಸರ್ ಸಹಿಗಾಗಿ ತುಂಬಾ ಕಷ್ಟ ಪಡಬೇಕಾಯಿತು. ಹೋದ ಕೂಡಲೇ ಸಹಿ ಸಿಗದೇ ಇದ್ದುದರಿಂದ ಕೆಲವು ದಿನಗಳನ್ನು ಚೆನ್ನೈ ನಲ್ಲೇ ಕಳೆಯುವ ಪರಿಸ್ಥಿತಿ ಬಂತು. ಕಡೆಗೂ ಫ್ರೋಫೆಸರ್ ಕಡೆಯಿಂದ ಸಹಿ ಸಿಕ್ಕಿತು. ಆ ವೇಳೆ ಪ್ರತಾಪ್ ತುಂಬಾನೇ ಸಂಕಷ್ಟಗಳಿಗೆ ಒಳಗಾದರು. ಆದರೂ ಹಠ ಬಿಡಲಿಲ್ಲ.
ಪ್ರತಾಪ್ ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತಿಯನ್ನು ಕಂಡು ಪ್ರೋತ್ಸಾಹಿಸಿದವರು ಇದ್ದಾರೆ. ಕೆಲ ದಾನಿಗಳ ನೆರವು ಪ್ರತಾಪ್ ಸಾಧನೆಗೆ ತುಂಬಾ ಸಹಕಾರವಾಯಿತು. ಜಪಾನಿಗೆ ತೆರಳಲು ಸುತ್ತೂರು ಮಠದ ಸ್ವಾಮಿಗಳು, ಮೈಸೂರಿನ ಜೆಎಸ್ ಎಸ್ ಕಾಲೇಜು ಬೋಧಕ ಸಿಬ್ಬಂಧಿಗಳು ಯುವ ವಿಜ್ಞಾನಿಗೆ ಬೆಂಬಲ ನೀಡಿದ್ದಾರೆ.
ಚಿನ್ನದ ಪದಕ ಗೆದ್ದೇ ಬಿಟ್ಟೆ
ಅಪಾರ ಸಮಸ್ಯೆಗಳನ್ನು ಎದುರಿಸುತ್ತಾ ಪ್ರತಾಪ್ ಟೊಕಿಯೋ ತಲುಪಿದರು. 360 ಕೆ.ಜಿ ತೂಕದ ಪರಿಕರಗಳನ್ನು ಬುಲೆಟ್ ರೈಲಿನಲ್ಲಿ ಸಾಗಿಸಲು ಹಣದ ಸಮಸ್ಯೆ ಎದುರಾಯಿತು. ಕಣ್ಣಲ್ಲಿ ನೀರು ಬಂದಿತ್ತು. ಎಷ್ಟೇ ಕಷ್ಟ ಬಂದರೂ ಧೈರ್ಯದಿಂದ ಮುನ್ನುಗ್ಗಿದರು. ತಂದೆ ತಾಯಿಯನ್ನು ನೆನೆದು ಕೊಂಡರು. ಕೋಟ್ಯಂತರ ಭಾರತೀಯ ಪ್ರತಿನಿಧಿಯಾಗಿ ಹೋಗಿರುವುದನ್ನು ಸ್ಮರಿಸಿಕೊಂಡರು. ಕಷ್ಟ ಮುಖ್ಯವಲ್ಲ. ಸಾಧನೆ ಮುಖ್ಯವೆಂದು ಆತ್ಮ ವಿಶ್ವಾಸದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಆಶ್ಚರ್ಯವೆಂಬಂತೆ ಜಪಾನ್ ನಲ್ಲಿ ನಡೆದ ಇಂಟರ್ ನ್ಯಾಶನಲ್ ರೊಬೊಟಿಕ್ಸ್ ಎಕ್ಸಿಬ್ಯೂಶನ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನೇ ಗೆದ್ದರು. ಭಾರತದ ಪ್ರತಾಪ್ ಅವರು ಚಿನ್ನದ ಪದಕ ಗೆದ್ದಿದ್ದಾರೆ. ವೇದಿಕೆ ಮೇಲೆ ಬರಬೇಕು ಎಂದಾಗ ನನ್ನನ್ನು ನಾನೇ ನಂಬಲಿಲ್ಲ ಎನ್ನುತ್ತಾರೆ ಪ್ರತಾಪ್.
ಪ್ರತಾಪ್ ತಯಾರಿಸಿರುವ ಈ ಯಂತ್ರದಿಂದ ಅನೇಕ ಪ್ರಯೋಜನಗಳಿವೆ. ಕೃಷಿ ಭೂಮಿ ಅಳತೆ, ಮಣ್ಣು ಪರೀಕ್ಷೆ,ಹವಾಮಾನ ಮುನ್ಸೂಚನೆ ನೀಡ ಬಲ್ಲದು.ಅಪಘಾತದ ಸಂದರ್ಭದಲ್ಲಿ ಔಷಧ ಪೂರೈಸುವ ದೃಷ್ಟಿಯಿಂದಲೂ ,ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಉದ್ದೇಶದಿಂದಲೂ ಈ ಸಾಧನ ಉತ್ತಮ ನೆರವು ನೀಡುತ್ತದೆ.
ಯುವ ವಿಜ್ಞಾನಿ ಮಂಡ್ಯ ಹುಡುಗನ ಸಾಧನೆ ಇವಿಷ್ಟು ಮಾತ್ರವಲ್ಲ. `ಆಲ್ಬರ್ಟ್ ಐನ್ ಸ್ಟಿನ್ ಇನೋವೇಶನ್’ ನಿಂದ ಚಿನ್ನದ ಪದಕ,ಫ್ರಾನ್ಸ್ ದೇಶದಿಂದ `ಯಂಗ್ ಸೈಂಟಿಸ್ಟ್’ ಬಿರುದು,ಜರ್ಮನ್ ದೇಶದ ಪ್ರತಿಷ್ಟಿತ `ಸಿಇಬಿಐಟಿ ಅವಾರ್ಡ್’ನ್ನು ಪಡೆದಿದ್ದಾರೆ.
ಪ್ರಸಿದ್ದ ವಿಜ್ಞಾನಿಯಿಂದ ಮನೆಗೆ ಆಹ್ವಾನ
ಪ್ರತಾಪ್ ಪ್ರತಿಭೆ ಕಂಡು ಜಪಾನಿನ ನೊಬೆಲ್ ಪುರಸ್ಕ್ರತ ವಿಜ್ಞಾನಿಯೊಬ್ಬರು ಅಚ್ಚರಿಗೊಳಗಾಗಿದ್ದಾರೆ. ವಿಜ್ಞಾನಿ ಶಿರಕಾವಾ ಅವರು ಖುದ್ದು ಪ್ರತಾಪ್ ರನ್ನು ಮಾತನಾಡಿಸಿ ಮನೆಗೆ ಬರುವಂತೆ ಆಹ್ವಾನಿಸಿದ್ದರು.
ದೇಶಕ್ಕಾಗಿ ದುಡಿಯಬೇಕು
ಸದ್ಯ ಮೈಸೂರಿನ ಜೆಎಸ್ ಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ ಸಿ ಓದುತ್ತಿರುವ ಇವರು ಡ್ರೋನ್ ಕ್ಷೇತ್ರದಲ್ಲಿ ಗಂಭೀರ ಸಂಶೋಧನೆಯಲ್ಲಿ ತೊಡಗಿದ್ದಾರೆ. ಪ್ರತಾಪ್ ಇಲ್ಲಿಯವರೆಗೆ ಬಂದ ಹಾದಿಯಲ್ಲಿ ಕಲ್ಲು ಮುಳ್ಳುಗಳೇ ತುಂಬಿದ್ದವು. ವಿಜ್ಞಾನದ ಆಸಕ್ತಿಯನ್ನು ಕಂಡು ಇವನೊಬ್ಬ ಹುಚ್ಚ ಎಂದು ಕರೆದವರು ಇದ್ದಾರೆ. ಹೀಗೆ ಹಲವರ ಟೀಕೆಗಳಿಗೂ ಗುರಿಯಾಗಿದ್ದ ಪ್ರತಾಪ್ ಅವರು, ಅದೆಲ್ಲವನ್ನು ಮೆಟ್ಟಿ ನಿಂತು ಸಾಧನೆ ತೋರಿದ್ದಾರೆ. ಇದೀಗ ಇವರ ಮುಂದೆ ವಿಶ್ವದ ಹಲವು ರಾಷ್ಟ್ರಗಳು ಅವಕಾಶಗಳ ಮಳೆಯನ್ನೇ ಸುರಿಸಿವೆ. ಆದರೆ ಪ್ರತಾಪ್ ನನ್ನ ಸೇವೆ ದೇಶಕ್ಕೆ ಮಾತ್ರ ಎಂದಿದ್ದಾರೆ. ದೇಶಕ್ಕಾಗಿ ದುಡಿಯ ಬೇಕು ಎಂದು ಹೇಳುವ ಇವರ ಮಾತುಗಳು ಯುವ ಜನರಲ್ಲಿ ಸ್ಪೂರ್ತಿ ತುಂಬಿಸುವಂತಿದೆ..