ರೀನಾ ಡಿಸೋಜಾ ಶೋದಲ್ಲಿ ಕ್ರಿಕೆಟಿಗ ಮೊಹಮ್ಮದ್ ಸಿರಾಜ್
February 8, 2019ನೋವಿನಲ್ಲೂ ಪದಕ ಗೆದ್ದ ಸತೀಶ್ ಶಿವಲಿಂಗಮ್
February 12, 2019ಹಳೆ ಫ್ಯಾಶನ್ ಏಕೆ ? ಹೊಸತನ್ನು ಟ್ರೈ ಮಾಡಿ …
ಹೊಸ ವರುಷ ಬಂದೇ ಬಿಟ್ಟಿತು. ದಿನಗಳು,ವರುಷಗಳು ಉರುಳುತ್ತಿದ್ದಂತೆ ಫ್ಯಾಶನ್ ಕೂಡ ಬದಲಾಗುತ್ತಲೇ ಇರುತ್ತದೆ. ಹೊಸತನ ಚಿಗುರೊಡೆಯುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಗೆ ಎಲ್ಲಿಲ್ಲದ ಬೇಡಿಕೆ. ಉಡುಪು,ಆಭರಣ,ಪಾದರಕ್ಷೆ,ಬ್ಯಾಗ್ ಇವೆಲ್ಲದರ ವಿನ್ಯಾಸಗಳು ಬೇರೆ ಬೇರೆ ಶೈಲಿಯಲ್ಲಿ ಇಂದು ಮಾರುಕಟ್ಟೆಗೆ ದಾಪುಗಾಲು ಇಡುತ್ತಿವೆ. ಯಾವುದೇ ಸಭೆ,ಸಮಾರಂಭಗಳಿಗೆ ಹೋದಾಗ ನಾವು ಉಡುವ ಬಟ್ಟೆಗಳು ನಮ್ಮ ಲುಕ್ ಅನ್ನೇ ಬದಲಾಯಿಸುತ್ತವೆ. ಹೇರ್ ಸ್ಟೈಲ್, ನೇಲ್ ಪಾಲಿಶ್ ಡಿಸೈನ್,ಐ ಶ್ಯಾಡೋ,ಲಿಪ್ ಸ್ಟಿಕ್ ಕಲರ್ಸ್ ಜತೆಗೆ ಫಿಟ್ ನೆಸ್ ಕುರಿತು ನಿಗಾ ವಹಿಸಬೇಕಾಗುತ್ತದೆ. ಆದರೆ ಇವೆಲ್ಲವು ಕಷ್ಟ ಎಂದೆನಿಸಬಾರದು. ನಾವು ಸದಾ ಫ್ಯಾಶನೇಬಲ್ ಆಗಿರಬೇಕೆಂದರೆ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳ ಬೇಕು. ಬದಲಾಗುತ್ತಿರುವ ಟ್ರೆಂಡ್ ಗಳ ಮೇಲೆ ಗಮನವಿಟ್ಟುಕೊಳ್ಳಬೇಕು. ಫ್ಯಾಶನ್ ನಲ್ಲಿ ಒಲವಿದ್ದರೆ ಸಾಲದು. ಕೆಲವು ಟ್ರಿಕ್ಸ್ ಕೂಡ ತಿಳಿದಿರಬೇಕು. ಅದು ನಿಮ್ಮನ್ನು ಗಮನ ಸೆಳೆಯುವಂತೆ ಮಾಡುತ್ತದೆ.
ನಿಮಗಿದು ತಿಳಿದಿರಲಿ
ಫ್ಯಾಶನ್ ಆಗಿ ಕಾಣಿಸಿಕೊಳ್ಳಬೇಕೆಂದರೆ ಫ್ಯಾಶನ್ ಟ್ರೆಂಡ್ ಗಳನ್ನು ಫೋಲೋ ಮಾಡಿ. ದಿನದಿಂದ ದಿನಕ್ಕೆ ಫ್ಯಾಶನ್ ಪ್ರಪಂಚದಲ್ಲಿ ಅಪ್ ಡೇಟ್ ಆಗಿ. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಶಾಪಿಂಗ್ ಫ್ಯಾಶನ್ ಗಳಿಗೆ ಬಾರೀ ಬೆಂಬಲ ನೀಡುತ್ತಿವೆ. ಫ್ಲಿಪ್ ಕಾರ್ಟ್, ಅಮೆಜಾನ್,ಸ್ನಾಪ್ ಡೀಲ್ ನಂತಹ ಆನ್ ಲೈನ್ ಮಾರ್ಕೆಟ್ ಗಳಲ್ಲಿ ನಾನಾ ಬಗೆಯ ಆಯ್ಕೆಗಳು ಸಿಗುತ್ತವೆ. ಫ್ಯಾಶನ್ ಡ್ರೆಸ್, ಸಾರಿ, ಪಾದರಕ್ಷೆ ,ಬ್ಯಾಗ್,ಮೊಬೈಲ್ ಗಳು ಇಲ್ಲಿ ಲಭ್ಯವಿದ್ದಾವೆ. ನೀವು ಮಾರುಕಟ್ಟೆಗಳಲ್ಲಿ ಡ್ರೆಸ್ ಖರೀದಿಸುತ್ತೀರಿ ಎಂದಾದರೆ ಡ್ರೆಸ್ ಮಳಿಗೆಗಳಿಗೆ ಭೇಟಿ ನೀಡಿ. ಆಗ ನಿಮಗೆ ಇತ್ತೀಚಿನ ಫ್ಯಾಶನ್ ಟ್ರೆಂಡ್ ಗಳ ಬಗ್ಗೆ ಅರಿವು ಮೂಡುತ್ತದೆ. ಫ್ಯಾಶನ್ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ವೆಬ್ ಸೈಟ್ಸ್,ಮ್ಯಾಗಜೀನ್ ಗಳು ನಿಮ್ಮ ಉಪಯೋಗಕ್ಕೆ ಬರಬಹುದು. ಹೀಗೆ ಫ್ಯಾಶನ್ ಬಗ್ಗೆ ಅಧ್ಯಯನ ಮಾಡಿದರೆ ನೀವು ಕೂಡ ಹೊಸತನಕ್ಕೆ ತೆರೆದು ಕೊಳ್ಳುತ್ತೀರಿ.
ಫ್ಯಾಶನ್ ಸೀರೆಗಳು
ಸೀರೆಯು ನಮ್ಮ ಸಾಂಪ್ರದಾಯಿಕ ತೊಡುಗೆ. ಮಹಿಳೆಯರ ಫೇವರಿಟ್. ಫ್ಯಾಶನ್ ಜಗತ್ತಿನಲ್ಲಿ ಸೀರೆಗೂ ಪ್ರಾಮುಖ್ಯತೆ ಇದೆ. ಅದರಲ್ಲು ಸೆಲೆಬ್ರೆಟಿಗಳು ಸೀರೆಯುಟ್ಟರೆ ಅದು ಸುದ್ದಿ. ನಟಿ ಮಣಿಯರು ಸೀರೆ ಉಟ್ಟರೆ ಮಹಿಳಾ ಮಣಿಗಳ ಕಣ್ಣು ಅವರತ್ತ ಸೆಳೆಯುತ್ತವೆ. ಇತ್ತೀಚಿನ ದಿನಗಳಲ್ಲಿ ಸೀರೆಯೂ ಫ್ಯಾಶನ್ ಪಟ್ಟಿಗೆ ಸೇರಿಕೊಂಡಿದೆ ಎಂದರೆ ತಪ್ಪಲ್ಲ. ಸಾಂಪ್ರದಾಯಿಕ ಉಡುಗೆ ಸೀರೆಯಲ್ಲಿ ಹಲವು ವಿನ್ಯಾಸಗಳು ಅನಾವರಣ ಗೊಳ್ಳುತ್ತಿವೆ. ಅಂದವನ್ನು ಇಮ್ಮಡಿಗೊಳಿಸುವ ಸೀರೆ ಯಾವತ್ತೂ ಔಟ್ ಆಫ್ ಫ್ಯಾಶನ್ ಆಗಿಲ್ಲ. ಹೊಸ ವಿನ್ಯಾಸಗಳು ಕಂಪನಿಗಳಿಂದ ಪರಿಚಯವಾಗುತ್ತಿದ್ದಂತೆ ಅದರ ಬೇಡಿಕೆ ಹೆಚ್ಚಾಗುತ್ತಿರುತ್ತದೆ. ಗಾಗ್ರ ,ಸಲ್ವಾರ್,ಕುರ್ತಾ,ಲೆಗ್ಗಿಂಗ್ಸ್ ,ಜೀನ್ಸ್ ಪ್ಯಾಂಟ್ ,ಟೀ-ಶರ್ಟ್ ಮುಂತಾದುವುಗಳು ಮಹಿಳೆಯರಿಗೆ ಅಚ್ಚು ಮೆಚ್ಚು ಎನಿಸಿದರೂ ಸೀರೆಗೊಂದು ಸ್ಥಾನ ಇದ್ದೇ ಇದೆ. ಝರಿ ಸೀರೆ,ಕಾಟನ್ ಸೀರೆ,ಸಿಂತೆಟಿಕ್,ಎಂಬ್ರಾಯ್ಡರಿ ಸೀರೆಗಳು ಬೇರೆ ಬೇರೆ ವಿನ್ಯಾಸಗಳಲ್ಲಿ ಬಂದು ಫ್ಯಾಶನ್ ಪ್ರಪಂಚವನ್ನಾಳುತ್ತಿವೆ. ಸೀರೆ ಉಟ್ಟು ಅದರ ಮೇಲೆ ಕೋಟ್ ರೀತಿಯ ಬ್ಲೌಸ್ ಹಾಕಿಕೊಳ್ಳುವುದು ಈಗಿನ ಟ್ರೆಂಡ್. ಕೆಲವರು ಶಾಲ್ ರೀತಿಯಲ್ಲಿ ಕೂಡ ಹಾಕಿಕೊಳ್ಳುತ್ತಾರೆ. ಸೀರೆಯನ್ನು ಇದೇ ತರಹ ಉಡಬೇಕೆಂಬ ನಿಯಮವೇನಿಲ್ಲ. ಪ್ರದೇಶಕ್ಕೆ ತಕ್ಕ ಹಾಗೆ ಉಡುವ ಕ್ರಮದಲ್ಲಿ ವ್ಯತ್ಯಾಸಗಳು ಬರುತ್ತವೆ.
ಫ್ಯಾಶನ್ ಬಳೆಗಳು
ಕಾಲಕ್ಕೆ ತಕ್ಕಂತೆ ಬಳೆಗಳ ಡಿಸೈನ್,ಬಣ್ಣ ಮತ್ತು ಆಕಾರಗಳಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಬಳೆ ಅಂದರೆ ಇಷ್ಟವೇ. ವಿದೇಶಿಗರು ಕೂಡ ಬಳೆಯ ಮೋಹಕತೆಗೆ ಮರುಳಾಗಿದ್ದಾರೆ. ಮಾರುಕಟ್ಟೆಗಳಲ್ಲಿ ಇಂದು ರೌಂಡ್,ಓವಲ್,ಸ್ಕ್ವೇರ್ ವಿವಿಧ ಆಕಾರಗಳಲ್ಲಿ ಬಳೆಗಳು ಕಾಣಸಿಗುತ್ತವೆ. ಎಲ್ಲೆಡೆ ಬಳೆ,ಬ್ರೇಸ್ ಲೈಟ್ಅಥವಾ ಕಂಕಣಗಳನ್ನು ಹೊಸ ಫ್ಯಾಶನ್ ಟ್ರೆಂಡ್ ಎಂಬಂತೆ ಉಪಯೋಗಿಸಿ ಕೊಳ್ಳುತ್ತಿದ್ದಾರೆ. ಇಂದು ಬಳೆಗಳು ಚಿನ್ನ,ಬೆಳ್ಳಿ,ಪಚ್ಚೆ,ಮರ,ಮಣಿ,ರಬ್ಬರ್,ಲೆದರ್,ಕಂಚು,ಗಾಜು ಹೀಗೆ ಅನೇಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಮಾರುಕಟ್ಟೆಗಳಲ್ಲಿನ ಆಕರ್ಷಕ ಬಳೆಗಳು,ಬ್ರೇಸ್ ಲೈಟ್ ಗಳು ಹುಡುಗಿಯರ ಮನ ಗೆಲ್ಲುತ್ತಿವೆ.
ಹೇರ್ ಸ್ಟೈಲ್
ಈಗಿನ ಯುವ ಜನತೆ ಡ್ರೆಸ್ ಸ್ಟೈಲ್ ಗೆ ಹೇಗೆ ಮಾರು ಹೋಗುತ್ತಾರೋ, ಹೇರ್ ಸ್ಟೈಲ್ ಗೂ ತಕ್ಷಣವೇ ಆಕರ್ಷಿತರಾಗುತ್ತಾರೆ. ಅದೊಂದು ಟೈಂನಲ್ಲಿ ಮಹಿಳೆ ,ಪುರುಷರು ಪಾರ್ಲರ್ ಗೆ ಹೋಗಿ ವಿವಿಧ ವಿನ್ಯಾಸಗಳಲ್ಲಿ ಹೇರ್ ಕಟ್ ಮಾಡಿಸುತ್ತಿದ್ದರು. ಆದರೆ ಈಗ ಟ್ರೆಂಡ್ ಬದಲಾಗಿದೆ. ಇದೀಗ ಹೆಚ್ಚಿನ ಹುಡುಗಿಯರು ಹೇರ್ ಸ್ಟ್ರ್ಯೆಟ್ನಿಂಗ್ ನತ್ತ ಒಲವು ತೋರುತ್ತಿದ್ದಾರೆ. ಗುಂಗುರು ಕೂದಲನ್ನು ಸ್ಟ್ರ್ಯೆಟ್ನಿಂಗ್ ಮಾಡಿಸಿ ಫ್ರೀ ಹೇರ್ ಬಿಡುವುದು ಈಗಿನ ಫ್ಯಾಶನ್. ಕೆಲವರು ತಾತ್ಕಾಲಿಕ ಹೇರ್ ಸ್ಟ್ರ್ಯೆಟ್ನಿಂಗ್ ಮಾಡಿಸಿಕೊಂಡರೆ,ಇನ್ನು ಕೆಲವರು 5-10 ಸಾವಿರ ರೂ. ಕೊಟ್ಟು ಪರ್ಮನೆಂಟ್ ಸ್ಟ್ರ್ಯೆಟ್ನಿಂಗ್ ಮಾಡಿಸಿಕೊಳ್ಳುತ್ತಿದ್ದಾರೆ. ಫ್ರೀ ಹೇರ್ ಗಳಲ್ಲಿಯೂ ವಿವಿಧ ವಿನ್ಯಾಸಗಳನ್ನು ಕಾಣ ಬಹುದು. ಸಿನಿಮಾ ಹಿರೋಯಿನ್ಸ್ ಬೇರೆ ಬೇರೆ ಹೇರ್ ವಿನ್ಯಾಸಗಳಿಂದ ಗಮನ ಸೆಳೆಯುತ್ತಾರೆ. ನಟಿ ಆಲಿಯಾ ಭಟ್ ಅವರ `ಬಿಚಿ ವೇವ್ಸ್’ ವಿನ್ಯಾಸ ಅವರ ಕೂದಲಿನ ಅಂದವನ್ನು ಹೆಚ್ಚಿಸುತ್ತದೆ. ನಟಿ ಐಶ್ವರ್ಯ ರೈ ಅವರು `ವೇವಿ ಟ್ರೇಸಸ್’ ವಿನ್ಯಾಸವನ್ನು ಮಾಡಿಸಿಕೊಂಡಿದ್ದರು. ಇದರಲ್ಲಿ ಅವರ ಸೌಂದರ್ಯವೇ ಇಮ್ಮಡಿಯಾಗಿತ್ತು. ಇನ್ನು ಚಿತ್ರ ನಟಿ ಪ್ರಿಯಾಂಕ ಚೋಪ್ರಾ ಅವರದು ಪ್ರತಿಯೊಂದು ಸಿನಿಮಾಗಳಲ್ಲೂ ಹೊಸ ಲುಕ್. ಪ್ರತಿ ಸಿನಿಮಾಗಳಲ್ಲೂ ಡಿಫರೆಂಟ್ ಕೇಶ ವಿನ್ಯಾಸದಿಂದ ಕಂಗೊಳಿಸುತ್ತಾರೆ.
ವೆರೈಟಿ ಬ್ಯಾಗ್ಸ್
ಉಡುವ ಬಟ್ಟೆಗಳಿಗೆ ಅನುಗುಣವಾಗಿ ಕೈಯ್ಯಲ್ಲೊಂದು ಬ್ಯಾಗ್ ಹಿಡಿದು ಕೊಳ್ಳುವುದು ಈಗಿನ ಟ್ರೆಂಡ್. ಕೆಲವರು ಧರಿಸಿಕೊಂಡ ಬಟ್ಟೆ ಕಲರ್ ಗೆ ಸೂಕ್ತವೆಂದೆನಿಸುವ ಬ್ಯಾಗ್ ಗಳನ್ನೇ ಆರಿಸಿಕೊಳ್ಳುತ್ತಾರೆ. ಇನ್ನು ಕೆಲವರ ಬ್ಯಾಗ್ ಅವರ ಡ್ರೆಸ್ ವಿನ್ಯಾಸವನ್ನು ಅವಲಂಭಿಸಿರುತ್ತದೆ. ಕಾಲಕ್ಕೆ ತಕ್ಕ ಹಾಗೆ ಬ್ಯಾಗ್ ಗಳು ಹೊಸ ರೂಪವನ್ನು ಪಡೆದು ಕೊಳ್ಳುತ್ತವೆ. ಸೀರೆ ಉಡುವಾಗ ಪ್ರತ್ಯೇಕ ಬ್ಯಾಗ್ ಗಳನ್ನು ಖರೀದಿಸಬೇಕಾಗುತ್ತದೆ. ಸಲ್ವಾರ್,ಕುರ್ತಾ,ಟೀ ಶರ್ಟ್ಸ್ ಆಯಾ ಡ್ರೆಸ್ ಗಳಿಗೆ ಅನುಗುಣವಾಗಿ ಅದಕ್ಕೊಪ್ಪುವಂತೆ ಬ್ಯಾಗ್ ಗಳನ್ನು ಹಾಕಿ ಕೊಂಡರೆ ಆಕರ್ಷಿತವಾಗಿರುತ್ತದೆ.
ಪಾದರಕ್ಷೆಗಳು
ಫ್ಯಾಶನ್ ಜಗತ್ತಿಗೆ ಕಾಲಿಟ್ಟರೆ ತೊಡುವ ಪಾದರಕ್ಷೆಗಳ ಮೇಲೆಯೂ ನಿಗಾ ಇಡಬೇಕಾಗುತ್ತದೆ. ಕೇವಲ ಬಟ್ಟೆ ಶೈಲಿಯ ಬಗ್ಗೆ ಗಮನ ಹರಿಸಿದರೆ ಸಾಲದು ಪಾದರಕ್ಷೆಗಳ ವಿಷಯಗಳಲ್ಲಿಯೂ ಪ್ರಾಮುಖ್ಯತೆ ನೀಡ ಬೇಕಾಗುತ್ತದೆ. ಮಹಿಳೆಯರಂತು ಈ ವಿಷಯಗಳಲ್ಲಿ ಹೆಚ್ಚಿನ ಒಲವು ತೋರಿಸುತ್ತಾರೆ. ದಿರಿಸುಗಳಿಗೆ ಸರಿ ಹೊಂದುವಂತಹ ಪಾದರಕ್ಷೆಗಳನ್ನು ಸಂಗ್ರಹಿಸಲು ಇಚ್ಚಿಸುತ್ತಾರೆ. ಈಗೀಗ ಮಾರುಕಟ್ಟೆಗಳಿಗೆ ಭಿನ್ನ-ವಿಭಿನ್ನವಾದ ಪಾದರಕ್ಷೆಗಳು ಲಗ್ಗೆಯಿಟ್ಟಿವೆ. ಹೀಲ್ಸ್,ಸ್ಲಿಪ್ಪರ್,ಶೂ ಇನ್ನಿತರ ಪಾದರಕ್ಷೆಗಳು ಗ್ರಾಹಕರನ್ನು ಪರಿಚಯಿಸುತ್ತಿವೆ. ಬೇರೆ ಬೇರೆ ಕಂಪೆನಿಗಳು ಫ್ಯಾಶನ್ ಲೋಕಕ್ಕೆ ಸ್ಪರ್ಧೆಯೊಡ್ಡುತ್ತಿವೆ. ವಿವಿಧ ಕಂಪೆನಿಗಳಿಂದ ಹಲವು ಬಗೆಯ ಪಾದರಕ್ಷೆಗಳು ಮಾರುಕಟ್ಟೆಯತ್ತ ಮುಖ ಮಾಡುತ್ತಿವೆ. ಇವುಗಳಲ್ಲಿ ನಮ್ಮ ಆಯ್ಕೆ ಯಾವುದು ಮತ್ತು ಡ್ರೆಸ್ ಗೆ ಸರಿ ಹೊಂದುವ ಪಾದರಕ್ಷೆ ಬಗ್ಗೆ ಗಮನಿಸಿ ಆರಿಸಿಕೊಂಡರೆ ಒಳಿತು.
ಕೇವಲ ಇವಿಷ್ಟು ಮಾತ್ರವಲ್ಲ. ನಮ್ಮ ಡ್ರೆಸ್ ಗಳಿಗೆ ಒಪ್ಪುವಂತೆ ಇಯರ್ ರಿಂಗ್,ಲಿಪ್ ಸ್ಟಿಕ್ ,ನೈಲ್ ಪಾಲಿಶ್, ಹಾಗೂ ನೆಕ್ಲೆಸ್ ,ಸರಗಳನ್ನು ಧರಿಸಿ ಕೊಂಡರೆ ಅತಿ ಸುಂದರವಾಗಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.